ADVERTISEMENT

ಬರ ಪರಿಹಾರಕ್ಕೆ ಶಾಶ್ವತ ನಿಧಿ ಅಗತ್ಯ: ಚಾಮರಸ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 6:15 IST
Last Updated 9 ಏಪ್ರಿಲ್ 2012, 6:15 IST

ಹುಣಸೂರು: ಪ್ರತಿ ವರ್ಷ ರಾಜ್ಯದಲ್ಲಿ ಬರಗಾಲ ಅಥವಾ ಅತಿವೃಷ್ಟಿ ತಲೆದೋರುತ್ತಿದೆ. ಆದರೂ ಈ ಸಮಸ್ಯೆಯಿಂದ ರೈತರನ್ನು ಕಾಪಾಡಲು ರಾಜ್ಯ ಅಥವಾ ಕೇಂದ್ರ ಸರ್ಕಾರ ಶಾಶ್ವತ ನಿಧಿ ಸ್ಥಾಪಿಸುವ ಯತ್ನ ಮಾಡಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಬೇಸರ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಳಿಕ ಭಾನುವಾರ ಹುಣಸೂರಿಗೆ ಭೇಟಿ ನೀಡಿ ಸಂಘದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ಬಾರಿ ಬರ ಅಥವಾ ನೆರೆ ಬಂದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಯುವ ಯೋಚನೆ ಮಾಡುತ್ತವೆ. ಇದಕ್ಕಾಗಿ ಬರ ಪರಿಹಾರ ಕಾಮಗಾರಿಯಂಥ ಯೋಜನೆ ಹಾಕಿಕೊಳ್ಳುತ್ತವೆ. ಆದರೆ, ಇದರಿಂದ ರೈತರ ಬದುಕು ಹಸನಾಗುವುದಿಲ್ಲ. ಇಂಥ ಸಮಸ್ಯೆಗೆ ಶಾಶ್ವತ ನಿಧಿ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ 14 ಜಿಲ್ಲೆಗಳ 123 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಉತ್ತರಕನ್ನಡ ಜಿಲ್ಲೆಯ ಕೃಷಿಕರು ಗುಳೆ ಹೋಗಿದ್ದಾರೆ. ಜಾನುವಾರು ರಕ್ಷಿಸಿಕೊಳ್ಳಲಾಗದೆ ಕಸಾಯಿ ಖಾನೆಗಳಿಗೆ ಮಾರುವ ಸ್ಥಿತಿ ಎದುರಾಗಿದೆ. ಆದರೂ ರಾಜ್ಯ ಸರ್ಕಾರ ರಾಜಕೀಯ ಮೇಲಾಟದಲ್ಲಿ ನಿರತವಾಗಿದೆ. ಬರ ಎದುರಾಗಿ ಈಗಾಗಲೇ ಎರಡು ತಿಂಗಳು ಕಳೆದಿವೆ. ಮುಖ್ಯಮಂತ್ರಿ ಸದಾನಂದಗೌಡರು ಈಗ ಬರ ಪರಿಸ್ಥಿತಿ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ದೂರಿದರು.

ರೈತರ ಧರಣಿ ಇಂದು: ಬರ ಪರಿಹಾರ ಕಾಮಗಾರಿ ವಿಳಂಬ ಖಂಡಿಸಿ ರೈತ ಸಂಘವು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಏ. 9 ರಂದು ಧರಣಿ ನಡೆಸಲಿದೆ ಎಂದು ತಿಳಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಬೊಮ್ಮೇಗೌಡ, ಉಪಾಧ್ಯಕ್ಷ ಮಂಜುನಾಥ್ ಅರಸು, ಮುಖಂಡರಾದ ನಾಗಣ್ಣಚಾರಿ, ಶಿವಲಿಂಗಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.