ADVERTISEMENT

ಬಾರದ ಮುಂಗಾರು: ಕೃಷಿಕರಲ್ಲಿ ಆತಂಕ

ಪ್ರಜಾವಾಣಿ ವಿಶೇಷ
Published 15 ಜೂನ್ 2012, 5:50 IST
Last Updated 15 ಜೂನ್ 2012, 5:50 IST
ಬಾರದ ಮುಂಗಾರು: ಕೃಷಿಕರಲ್ಲಿ ಆತಂಕ
ಬಾರದ ಮುಂಗಾರು: ಕೃಷಿಕರಲ್ಲಿ ಆತಂಕ   

ಹುಣಸೂರು: ಮುಂಗಾರು ಮಳೆ ವಿಳಂಬಗೊಂಡಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದ್ದು ಅರೆ ಮಲೆನಾಡಿನಾದ್ಯಂತ ಮಂಕು ಕವಿದಂತಾಗಿದೆ.

ಹಲವು ರೈತರು ಮೇ ತಿಂಗಳಲ್ಲಿ ಬಿದ್ದ ಮಳೆ ನೆಚ್ಚಿಕೊಂಡು ಬೇಸಾಯ ಆರಂಭಿಸಿದ್ದು ದ್ವಿದಳ ಧಾನ್ಯ, ಮುಸುಕಿನ ಜೋಳ, ನೆಲಗಡಲೆ ಮತ್ತು ಎಳ್ಳು ಬಿತ್ತನೆ ಮಾಡಿ ಮಳೆ ನಿರೀಕ್ಷೆಯಲ್ಲಿ ದಿನ ಏಣಿಸುತ್ತಿದ್ದಾರೆ. ಹುಣಸೂರು ತಾಲ್ಲೂಕಿನಲ್ಲಿ ವಾಡಿಕೆಯಂತೆ ಮಳೆಗಾಲದಲ್ಲಿ ಜೂನ್ 10ರವರಗೆ  240 ರಿಂದ 250 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಈವರೆಗೆ ಕೇವಲ 194 ಮಿ.ಮೀ ಮಳೆಯಾಗಿದೆ. 2011ರ ಮೇ ಮತ್ತು ಜೂನ್ ತಿಂಗಳಲ್ಲಿ ಸರಾಸರಿ 270- 280 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಹೆಚ್ಚೆನಿಸಿತ್ತು.

ತಾಲ್ಲೂಕಿನಲ್ಲಿ ತಂಬಾಕು ಕೃಷಿಕರು ಈಗಾಗಲೇ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ
ಸಸಿ ನಾಟಿ ಕಾರ್ಯ ಮುಗಿಸಿ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಬಾರದಿದ್ದರೆ ತಂಬಾಕು ನಾಟಿ ಮಾಡಿದ ರೈತರೂ ತೀವ್ರ ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಬಿಳಿಕೆರೆ, ಹನಗೋಡು ಮತ್ತು ಗಾವಡಗೆರೆ ಹೋಬಳಿ ಭಾಗದಲ್ಲಿ ಬಹುತೇಕ ಕೃಷಿಕರು ಭೂಮಿ ಹದಗೊಳಿಸಿ ಬಿತ್ತನೆಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮಳೆ ಸಕಾಲಕ್ಕೆ ಬಾರದೇ ಯಾವ ಋತುವಿನಲ್ಲಿ ವ್ಯವಸಾಯ ಆರಂಭಿಸಬೇಕು ಎಂಬುದೇ ದೊಡ್ಡ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಕಲ್ಲಹಳ್ಳಿಯ ಭೋಗಪ್ಪ.

ಆತಂಕದಲ್ಲಿ ಬೆಳೆಗಾರ: ತಾಲ್ಲೂಕಿನ ಬಿಳಿಕೆರೆ, ಹನಗೋಡು ಮತ್ತು ಗಾವಡಗೆರೆ ಹೋಬಳಿ ಭಾಗದಲ್ಲಿ ಹೆಚ್ಚಾಗಿ ದ್ವಿದಳ ಧಾನ್ಯ ಬೆಳೆಯಲಾಗುತ್ತದೆ. ಈ ಬಾರಿ ಅಂದಾಜು ಒಂಬತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೇಸಾಯ ನಡೆಸಲಾಗಿದೆ. ಮುಂಗಾರು ಮಳೆ ಮೇ ಮಧ್ಯಭಾಗದಲ್ಲಿ ಬಿದ್ದಷ್ಟು ನಂತರದಲ್ಲಿ ಬಾರದಿರುವುದು ಈ ಬೆಳೆಗಳಿಗೆ ತೊಂದರೆ ಎದುರಾಗಿದೆ.

ದ್ವಿದಳ ಧಾನ್ಯ ಮತ್ತು ನೆಲಗಡಲೆಗೆ ಜೂನ್ ಮೊದಲ ವಾರದಲ್ಲಿ ಮಳೆ ಅವಶ್ಯ. ಜೂನ್ 10 ಕಳೆದರೂ ಮಳೆ ಇಲ್ಲದೇ ಅಲಸಂದೆ, ಹೆಸರು, ಕಡಲೆ ನೆಲಕಚ್ಚುವ ಸಾಧ್ಯತೆ ಎದುರಾಗಿದ್ದು ದ್ವಿದಳ ಧಾನ್ಯ ಹಾಕಿದ ಬೇಸಾಯಗಾರರು ತೀವ್ರ ಆತಂಕದಲ್ಲಿದ್ದಾರೆ.  

ಬಿತ್ತನೆ ವಿವರ: 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಆರಂಭವಾಗಬೇಕಿದ್ದು, ಮಳೆ ವಿಳಂಬಗೊಂಡ ಕಾರಣ 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

28 ಸಾವಿರ ಹೆಕ್ಟೇರ್‌ದಲ್ಲಿ ತಂಬಾಕು ಬೆಳೆಯೇ ಸಿಂಹಪಾಲು ಪಡೆದಿದ್ದು, 9 ಸಾವಿರ ಹೆಕ್ಟೇರ್ ಮುಸುಕಿನ ಜೋಳ, 3.5 ಸಾವಿರ ಹೆಕ್ಟೇರ್ ದ್ವಿದಳಧಾನ್ಯ, ಒಂದು ಸಾವಿರ ಹೆಕ್ಟೇರ್ ನೆಲಗಡಲೆ, 950 ಹೆಕ್ಟೇರ್ ಹತ್ತಿ, 1,500 ಹೆಕ್ಟೇರ್ ಎಳ್ಳು ಬೇಸಾಯ ಮಾಡಲಾಗಿದೆ.

ರಾಗಿ ಕೈಬಿಟ್ಟ ರೈತ: ಹುಣಸೂರು ರಾಗಿ ಕಣಜ ಎಂದೇ ಹೆಸರು ಗಳಿಸಿತ್ತು. ಆದರೆ ಇತ್ತೀಚೆಗೆ ರಾಗಿ ಬೇಸಾಯ ಗಣನೀಯವಾಗಿ ಕುಸಿದಿದ್ದು ರೈತರು ಮುಸುಕಿನ ಜೋಳ ಬೇಸಾಯದತ್ತ ವಾಲಿದ್ದಾರೆ. ಕಳೆದ ಸಾಲಿನಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೇಸಾಯ ಮಾಡಲಾಗಿತ್ತು, ಈ ಬಾರಿ 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ.

ಆದರೆ ಬಿಳಿಕೆರೆ ಮತ್ತು ಗಾವಡಗೆರೆ ಭಾಗದಲ್ಲಿ ಅಂದಾಜು 4-5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಕೃಷಿ ಮಾಡಲಾಗಿದೆ. ಮಳೆ ಕೊರತೆಯಿಂದಾಗಿ ಮೊಳಕೆ ಒಡೆದ ಮುಸುಕಿನ ಜೋಳ ನೆಲದಿಂದ ಮೇಲೆ ಬರಲಾಗದೇ ಒಣಗಿದೆ.  ಹನಗೋಡು ಹೋಬಳಿ ಭಾಗದಲ್ಲಿ ಮಾತ್ರ ಉತ್ತಮ ಬೆಳೆ ಇನ್ನೂ ಕಾಣುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.