ADVERTISEMENT

ಬಿಜೆಪಿ ಗೊಂದಲದ ಗೂಡು: ಬಿಕೆಸಿ

ಅತ್ಯಾಚಾರ ಪ್ರಕರಣ: ಪ್ರಧಾನಿ ಮೋದಿ ಮೌನಕ್ಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:22 IST
Last Updated 4 ಮೇ 2018, 11:22 IST

ಮೈಸೂರು: ರಾಜ್ಯದಲ್ಲಿ ಬಿಜೆಪಿ ಒಡೆದ ಮನೆಯಂತಾಗಿದ್ದು, ಆಂತರಿಕ ಸಂಘರ್ಷದಿಂದ ಗೊಂದಲದಲ್ಲಿ ಸಿಲುಕಿದೆ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ ಗುರುವಾರ ಇಲ್ಲಿ ಹೇಳಿದರು.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಮುಸಕಿನ ಗುದ್ದಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನಾರ್ದನ ರೆಡ್ಡಿ ಅವರನ್ನು ಅಮಿತ್‌ ಶಾ ಪಕ್ಷದಿಂದ ದೂರ ಇಟ್ಟಿದ್ದಾರೆ. ಆದರೆ ಬಿಜೆಪಿಗೆ ರೆಡ್ಡಿ ಸೇವೆ ಬೇಕಿದೆ ಎಂದು ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ರಾಷ್ಟ್ರೀಯ ಅಧ್ಯಕ್ಷರಿಗೆ ಸವಾಲೆಸೆದಿದ್ದಾರೆ ಎಂದು ವಿಶ್ಲೇಷಿಸಿದರು.

ADVERTISEMENT

ವರುಣಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿದ ಬಳಿಕ ಬಿಜೆಪಿಯಲ್ಲಿ ಯಾವುದೂ ಸರಿಯಿಲ್ಲ. ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಭರ್ಜರಿ ಪ್ರಚಾರವನ್ನೂ ನಡೆಸಿದ್ದರು. ಆದರೆ ಕೊನೆಯಲ್ಲಿ ಸ್ಪರ್ಧಿಸುವ ಅವಕಾಶ ಕಿತ್ತುಕೊಳ್ಳಲಾಗಿದೆ. ಇದರಿಂದ ಕೋಪಗೊಂಡಿರುವ ಅಪ್ಪ ಮತ್ತು ಮಗ, ಶಾ ಹಾಗೂ ಅನಂತಕುಮಾರ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಪ್ರಧಾನಿ ಮೌನ ಮುರಿಯಲಿ: ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಬೇಕು ಎಂದು ಆಗ್ರಹಿಸಿದರು.

ಅತ್ಯಾಚಾರ ಪ್ರಕರಣದ ಬಗ್ಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾದ ಬಳಿಕ ಮೋದಿ ಅವರು ತೂಕವಿಲ್ಲದ ಮಾತುಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಲಂಡನ್‌ ಭೇಟಿಯ ವೇಳೆ ಮಾತನಾಡುತ್ತಾ, ‘ಅತ್ಯಾಚಾರ ಪ್ರಕರಣ ವನ್ನು ರಾಜಕೀಯ ಗೊಳಿಸಬಾರದು’ ಎಂದಿದ್ದಾರೆ. ನಿಮ್ಮ ಪಕ್ಷದವರು ಹಿಂದೆ ಇಂತಹದೇ ಪ್ರಕರಣ ಗಳನ್ನು ರಾಜಕೀಯಗೊಳಿಸಿದ್ದು ಮರೆತು ಹೋಯಿತೇ ಎಂದು ಪ್ರಶ್ನಿಸಿದರು.

ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯವರು ‘ಮತ ಚಲಾಯಿಸುವ ಸಂದರ್ಭದಲ್ಲಿ ನಿರ್ಭಯ ಪ್ರಕರಣವನ್ನು ನೆನಪಿಸಿಕೊಳ್ಳಿ’ ಎಂದು ಪದೇ ಪದೇ ಹೇಳಿಲ್ಲವೇ ಎಂದು ಕೇಳಿದರು.

ಅತ್ಯಾಚಾರ ಘಟನೆಗಳು ಹೆಚ್ಚಾಗಿರಲು ಯುಪಿಎ ಸರ್ಕಾರದ ಸಂವೇದನಾರಹಿತ ಆಡಳಿತ ಕಾರಣವಾಗಿದ್ದು, ಪ್ರಧಾನಿ ಇದರ ಜವಾಬ್ದಾರಿ ಹೊರಬೇಕು ಎಂದು ಎಂದು ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್‌ ಹೇಳಿರಲಿಲ್ಲವೇ ಎಂದು ಪ್ರಶ್ನಿಸಿದರು.

ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಯಾವ ರೀತಿ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನ ಮೋದಿ ಅವರಿಗೆ ಇಲ್ಲ. ಗುಜರಾತ್‌ ಮುಖ್ಯಮಂತ್ರಿ ಹುದ್ದೆಯಿಂದ ನೇರವಾಗಿ ಪ್ರಧಾನಿ ಹುದ್ದೆಗೇರಿರುವ ಕಾರಣ ಅನುಭವದ ಕೊರತೆ ಎದ್ದುಕಾಣುತ್ತದೆ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಕೆ.ಲೋಕೇಶ್‌ ರಾವ್‌, ಬಿ.ಕೆ.ಪ್ರಕಾಶ್‌, ಮಲ್ಲಿಗೆ ವೀರೇಶ್‌, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಹಾಜರಿದ್ದರು.

‘ಯೋಗಿಯ ಉಪದೇಶ ಬೇಕಿಲ್ಲ’

ಬಿಜೆಪಿಯ ‘ಬೌದ್ಧಿಕ ದಿವಾಳಿತನ’ದ ಪ್ರತೀಕದಂತಿರುವ ಯೋಗಿ ಆದಿತ್ಯನಾಥ್‌ ಅವರ ಉಪದೇಶ ರಾಜ್ಯದ ಜನರಿಗೆ ಬೇಕಿಲ್ಲ ಎಂದು ಚಂದ್ರಶೇಖರ್‌ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಅಲ್ಲಿ ಪ್ರತಿದಿನ ಸರಾಸರಿ 4–5 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ತನ್ನದೇ ರಾಜ್ಯದಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡ ವ್ಯಕ್ತಿ ಇಲ್ಲಿ ಉಪದೇಶ ನೀಡಲು ಏನಿದೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.