ತಿ.ನರಸೀಪುರ: ಎಲ್‌ಪಿಜಿ ಗ್ರಾಹಕರಿಗೆ ಸೀಮೆ ಎಣ್ಣೆ ಹಂಚಿಕೆ, ಪರೀಕ್ಷೆ ವೇಳೆ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ತಿರಮಕೂಡಲಿನ ಚೌಡಯ್ಯ ವೃತ್ತದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಕಾಲೇಜು ರಸ್ತೆಯಲ್ಲಿ ಸಾಗಿ ತಾಲ್ಲೂಕು ಕಚೇರಿಗೆ ತೆರಳಿ ಸ್ವಲ್ಪ ಕಾಲ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಕಚೇರಿಗೆ ಮನವಿ ಅರ್ಪಿಸಿದರು.
ಗ್ಯಾಸ್ ಗ್ರಾಹಕರಿಗೆ ಸೀಮೆ ಎಣ್ಣೆ ಹಂಚಿಕೆ ಮಾಡದಿರುವುದು ಖಂಡನೀಯ. ಒಂದು ಸಿಲಿಂಡರ್ ಇರುವ ಗ್ರಾಹಕರು ಅಥವಾ ಗ್ಯಾಸ್ ಮುಗಿದರೆ ತುರ್ತಾಗಿ ಬಳಸಲು ಪರ್ಯಾಯ ಇಂಧನವಾಗಿ ಸೀಮೆ ಎಣ್ಣೆ ಅಗತ್ಯವಿದೆ. ಪ್ರತಿ ಪಡಿತರದಾರರಿಗೆ ಕನಿಷ್ಟ 2 ಲೀ. ಸೀಮೆ ಎಣ್ಣೆ ನೀಡಬೇಕು. ಈಗ ಪರೀಕ್ಷೆ ಸಮಯ. ವಿದ್ಯುತ್ ತೊಂದರೆ ತಡೆಗಟ್ಟಿ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು.
ರಸಗೊಬ್ಬರವನ್ನು ಎಂಆರ್‌ಪಿ ದರದಲ್ಲಿ ಮಾರಲು ಸೂಚನೆ, ಕೃಷಿ ಸಹಾಯಕ ನಿರ್ದೇಶಕರ ವರ್ಗಾವಣೆ, ರೈತರ ಸಭೆ ಕರೆಯಲು ಆಗ್ರಹ, ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ, ಒಡ್ಗಲ್ ರಂಗನಾಥಸ್ವಾಮಿ ಬಟ್ಟದ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ, ರೈತರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾ ಕಾರ್ಯಕರ್ತರು ಒತ್ತಾಯಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಆಲಗೂಡು ಮಹಾದೇವ್, ಶಿವಣ್ಣ, ಕಳ್ಳಿಪುರ ಮಹಾದೇವಸ್ವಾಮಿ, ಚಿದರವಳ್ಳಿ ನಾಗೇಂದ್ರ, ಶಿವಪ್ರಕಾಶ್, ಕುಮಾರಸ್ವಾಮಿ, ಕರಾವೇ ಅಧ್ಯಕ್ಷ ಶ್ರೀನಿವಾಸ್, ಸುನಂದಮ್ಮ, ದಸಂಸ ಸಂಚಾಲಕ ಕುಕ್ಕೂರು ರಾಜು, ಶೋಭಾ, ನಾಗರಾಜು, ಪುಟ್ಟಸ್ವಾಮಿ ಇತರರು ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.