ADVERTISEMENT

ಮಕ್ಕಳ ಗಾಯನಕ್ಕೆ ಮನಸೋತ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 6:18 IST
Last Updated 16 ಸೆಪ್ಟೆಂಬರ್ 2013, 6:18 IST
ಮೈಸೂರಿನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಹಾಡಿದ ಬಾಲಕಿಯರು.
ಮೈಸೂರಿನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಹಾಡಿದ ಬಾಲಕಿಯರು.   

ಮೈಸೂರು: ‘ಮನಸು ಎಂಬುದು ಮಾಯಾ ಲೋಕ ಬಣ್ಣನೆಗಳಿಗೆ ನಿಲುಕದ ಚಿತ್ರ ಮಾಡಿದಾತನೆ ಮಾಯಾಕಾರ ಮನಸು ಎಂಬುದು ವಿಸ್ಮಯ ಜಾಲ...

-–ಹೀಗೆ ಭಾವಗೀತೆಯನ್ನು ಹತ್ತು ವರ್ಷದ ಬಾಲಕಿ ನಯನಾ ಸುಶ್ರಾವ್ಯ­ವಾಗಿ ಹಾಡುತ್ತಿದ್ದರೆ ಪ್ರೇಕ್ಷಕರು ಮೈಮರೆತು ಕೇಳಿದರು.

ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಮಕ್ಕಳು ಹೀಗೆ ಸಾಲು ಸಾಲಾಗಿ ಹಾಡಿದರು.

ಮೈಸೂರು ಜಿಲ್ಲೆ ಸುತ್ತಮುತ್ತ­ಲಿನ ಪ್ರದೇಶಗಳಿಂದ ಸ್ಪರ್ಧೆಗೆ ಆಗಮಿಸಿದ್ದ ಒಟ್ಟು 88 ಸ್ಪರ್ಧಿಗಳು ವಿವಿಧ ರಾಗಗಳಲ್ಲಿ ಗಾಯನ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

‘ಹಗಲೆಲ್ಲಾ ದೂಳಿನಲ್ಲಿ ಗೊಂಬೆ­ಯಾಟ­ವನ್ನಾಡಿ, ಇರುಳು ಬರೇ ಮಲಗುವೇನು ನಿನ್ನ ಮಡಿಲಿನಲ್ಲಿ’, ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲ’, ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ’ ಎಂಬ ಪ್ರಸಿದ್ಧ ಕವಿಗಳ ಭಾವಗೀತೆಗಳನ್ನು 8ದಿಂದ 12 ವರ್ಷದೊಳಗಿನ ವಿಭಾಗದಲ್ಲಿ ಮಕ್ಕಳು ಮನಸೂರೆಗೊಳ್ಳುವ ಹಾಗೆ  ಗಾಯನ ಪ್ರಸ್ತುತಪಡಿಸಿದರು.

ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸೆ. 29ರಂದು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂದು ಜಯಂತಿ ಭಟ್‌ ಅವರಿಂದ ಸುಗಮ ಸಂಗೀತ ಕಛೇರಿ ನಡೆಯಲಿದೆ.

ಕೃಪಾ ನಾಡಿಗ್‌, ವಿಮಲಾ ಕೃಷ್ಣಮೂರ್ತಿ, ಪ್ರೊ.ಆರ್‌. ಶೈಲಾ ಹಾಗೂ ಪ್ರಭಾಮಣಿ  ಮಂಜುನಾಥ್‌ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.