ಪಿರಿಯಾಪಟ್ಟಣ: ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು, ಅದರ ಆಧಾರದ ಮೇಲೆ ವ್ಯವಸಾಯ ಮಾಡಲು ಮುಂದಾದರೆ ಒಳಿತು ಎಂದು ಕೃಷಿ ವಿಜ್ಞಾನಿ ಡಾ.ಅರಸು ಮಲ್ಲಯ್ಯ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಕೃಷಿ ಇಲಾಖೆ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಭೂ ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ‘ಭೂ ಚೇತನ’ ಯೋಜನೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಪ್ರಮುಖ ಯೋಜನೆಯಾಗಿದೆ. ಮಣ್ಣಿನಲ್ಲಿ ಲಘು ಪೋಷಕಾಂಶಗಳ ಕೊರತೆ ಕಂಡುಬಂದಿದ್ದು ರೈತರು ಕಡ್ಡಾಯವಾಗಿ ಒಂದು ಬೆಳೆಯನ್ನು ಬೆಳೆಯಲು 16 ಪೋಷಕಾಂಶಗಳ ಅವಶ್ಯಕತೆಯಿದೆ. ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ರಾಸಾಯನಿಕ ಗೊಬ್ಬರಗಳ ಜೊತೆಗೆ, ಲಘು ಪೋಷಕಾಂಶಗಳಾದ ಜಿಪ್ಸಂ 100 ಎಕರೆಗೆ, ಜಿಂಕ್ ಸಲ್ಪೇಟ್ 10 ಕೆ.ಜಿ, ಬೋರಾನ್ 4 ಕೆ.ಜಿ, ಪಿ.ಎಸ್.ಬಿ 2 ಕೆ.ಜಿ, ಟ್ರೈಕೋಡರ್ಮಾ 2 ಕೆ.ಜಿ ಇವುಗಳನ್ನು ಬಿತ್ತನೆಗೆ 20 ದಿನ ಮುಂಚಿತವಾಗಿ ಭೂಮಿಗೆ ಸೇರಿಸಿ, ಬಿತ್ತನೆ ಕಾರ್ಯ ಕೈಗೊಳ್ಳುವುದರಿಂದ ರೈತರು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಂಡು, ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ಹೇಳಿದರು.
‘ಆತ್ಮ’ ಯೋಜನೆಯ ಉಪನಿರ್ದೇಶಕ ಎಸ್. ಸತೀಶ್ ಮಾತನಾಡಿ, ರೈತರು ತಮ್ಮ ಭೂಮಿಯಲ್ಲಿ ಸಮಗ್ರ ಕೃಷಿಯಾದ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ, ಇವುಗಳನ್ನು ಕೃಷಿ ಜತೆಗೆ ಉಪ ಕಸುಬಾಗಿ ಮಾಡಿಕೊಂಡಾಗ ತಮ್ಮ ಆರ್ಥಿಕ ಮಟ್ಟವನ್ನು ರೈತರು ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಕೆ. ರಾಜು ಅವರು ಮಾತನಾಡಿ, ರೈತರು ಇಂದಿನ ಪ್ರಸಕ್ತ ಪರಿಸ್ಥಿತಿಯಲ್ಲಿ ಕೃಷಿ ಸಂಶೋಧನೆಯಿಂದ ಹೊರಬಂದ ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು, ಬಿತ್ತನೆ ಕಾರ್ಯವನ್ನು ಕೈಗೊಳ್ಳಬೇಕು. ಕೃಷಿ ಪರಿಕರಗಳು ಸಹಾಯಧನದಲ್ಲಿ ದೊರೆಯುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಎಂ. ಹೊಂಬಯ್ಯ ಹಾಗೂ ಶ್ರೀನಿವಾಸ ಶೆಟ್ಟಿ ಕೃಷಿ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ರೇಷ್ಮೆ ಇಲಾಖೆಯ ಪ್ರದರ್ಶಕ ಚಂದ್ರೇಗೌಡ, ತೋಟಗಾರಿಕೆ ಇಲಾಖೆಯ ಪ್ರಸಾದ್, ಪಶು ವೈದ್ಯಾಧಿಕಾರಿ ಡಾ.ಸುರೇಶ್ ಇಲಾಖೆಯಲ್ಲಿ ರೈತರಿಗೆ ಸಿಗುವ ಸವಲತ್ತುಗಳು ಕುರಿತು ಮಾತನಾಡಿದರು.
ಸಭೆಯಲ್ಲಿ ತಾಂತ್ರಿಕ ಅಧಿಕಾರಿ ಎಚ್.ಎನ್. ರಾಮಕೃಷ್ಣ, ಸಹಾಯಕ ಕೃಷಿ ಅಧಿಕಾರಿಗಳಾದ ಎಚ್.ಆರ್. ಶಿವಣ್ಣ, ಸಿ.ಆರ್. ಮಹೇಶ್, ನವ್ಯಾ ನಾಣಯ್ಯ, ‘ಆತ್ಮ’ ವಿಷಯ ತಜ್ಞರಾದ ಗಣೇಶ್, ಕಾವೇರಿ ಮಾತಾ ಟ್ರಸ್ಟ್ ಅಧ್ಯಕ್ಷೆ ಪದ್ಮಮ್ಮ ಮತ್ತು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.