ತಿ.ನರಸೀಪುರ: ಸಾಗಣಿಕೆಗೆ ಪರವಾನಗಿ ಪಡೆದು ಅಧಿಕಾರಿಗಳ ಸಹಿ ಪಡೆಯಲು ನಿಂತಿದ್ದ ಮರಳಿನ ಲಾರಿಗಳನ್ನು ಅಕ್ರಮ ಮರಳು ಗಣಿಗಾರಿಕೆಯ ಲಾರಿಗಳು ಎಂದು ಬಿಂಬಿಸಿ ಟಿವಿ ಮಾಧ್ಯಮಗಳ ಮೂಲಕ ಸುಳ್ಳು ವದಂತಿ ಹಬ್ಬಿಸಲಾಗಿದೆ ಎಂದು ತಾಲ್ಲೂಕಿನ ಲಾರಿ ಮಾಲೀಕರು ನಿಲಸೋಗೆ ಗ್ರಾಮದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ನಿಲಸೋಗೆ ಗ್ರಾಮದ ಕಾವೇರಿ ನದಿಯಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಣಿಕೆ ಮಾಡಲಾಗುತ್ತಿದೆ ಎಂದು ಬುಧವಾರ ವಿವಿಧ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಿತು.
ಲಾರಿ ಮಾಲೀಕರು ಡಿ.ಡಿ ಸಲ್ಲಿಸಿ ಮರಳು ಸಾಗಾಣಿಕೆ ಪರವಾನಗಿ ಚೀಟಿ ಪಡೆದಿದ್ದರು. ಮರಳು ಸಾಗಿಸಲು ಲಾರಿಗಳಿಗೆ ಪರವಾನಗಿ ಕೂಡ ವಿತರಿಸಲಾಗಿತ್ತು. ಲಾರಿಗಳಿಗೆ ಮರಳು ತುಂಬಿ ಅಧಿಕಾರಿಗಳಿಗೆ ಪರವಾನಗಿಗೆ ಸಹಿ ಮಾಡಿಸಲು ನಿಂತಿದ್ದ ವೇಳೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಹಾಗೂ ಇದಕ್ಕೆ ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಸಚಿವರ ಸಹಕಾರವಿದೆ ಎಂಬ ಸುಳ್ಳು ಮಾಹಿತಿ ನೀಡಿ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವುದು ವಿಷಾದನೀಯ. ಅಕ್ರಮ ತಡೆಯುವಂತೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಹೀಗಿರುವಾಗ ವಿನಾಕಾರಣ ಅವರ ಹೆಸರಿಗೆ ಅಪಪ್ರಚಾರ ಮಾಡುತ್ತಿದ್ದಾರೆ ಹಾಗೂ ಮಾಧ್ಯಮಗಳನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೆಲವರ ಕುಮ್ಮಕ್ಕಿನಿಂದ ಮರಳು ಸಾಗಣೆಯನ್ನು ಅಕ್ರಮವೆಂದು ಬಿಂಬಿಸಲಾಗಿದೆ. ಒಂದು ವೇಳೆ ಮರಳು ಅಕ್ರಮ ಸಾಗಣೆ ನಡೆದಿದ್ದರೆ ಲೋಕಾಯುಕ್ತ ತನಿಖೆಗೂ ಸಿದ್ಧವಿದ್ದು, ಕೂಡಲೇ ತನಿಖೆ ಪ್ರಾರಂಭಿಸಲಿ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಎಚ್.ಎಸ್. ಅರುಣಪ್ರಭಾ ನಿರ್ವಹಣೆಯ ಲೋಪದಿಂದಾಗಿ ಈ ಸಮಸ್ಯೆ ಉಂಟಾಗಿದ್ದು, ಮರಳು ಯಾರ್ಡ್‌ನಲ್ಲಿ ಪರ್ಮಿಟ್ ಪಡೆದ ಲಾರಿಗಳಿಗೆ ಮರಳು ತುಂಬಿಸಲು ಕ್ರಮ ಕೈಗೊಳ್ಳದೆ ನೇರವಾಗಿ ನದಿ ಪಾತ್ರಕ್ಕೆ ತೆರಳಲು ಸೂಚಿಸಿದ್ದರಿಂದ ಗೊಂದಲವಾಗಿದೆ ಎಂದರು. ಇದೇ ವೇಳೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಕಾರ್ಯವೈಖರಿಯನ್ನು ಆಕ್ಷೇಪಿಸಿದರು.
ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಅವರು ಮಾತನಾಡಿ, ಪರ್ಮೀಟ್ ಪಡೆದ ದಿನವೇ ಮರಳು ಸಾಗಣಿಕೆ ಮಾಡಬೇಕು.
ಇಲ್ಲದಿದ್ದರೆ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಭಟನಾನಿರತ ಲಾರಿ ಮಾಲೀಕರಿಗೆ ತಿಳಿಸಿದರು. ಕಂದಾಯಾಧಿಕಾರಿ ಆನಂದ್‌ರಾವ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮರಳು ತುಂಬಿದ ಲಾರಿಗಳ ಪರವಾನಗಿ ಚೀಟಿ ಪರಿಶೀಲಿಸಿದರು. ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಸಲೆ ಎಂ. ಪುಟ್ಟಸ್ವಾಮಿ, ಉಮೇಶ, ಕೃಷ್ಣ, ಮಂಜುನಾಥ, ನಟರಾಜು, ನವೀನ್, ಕಲೀಲ್ ಅಹಮದ್, ರವೀಶ್ ಸೇರಿದಂತೆ ಹಲವು ಲಾರಿ ಮಾಲೀಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.