ADVERTISEMENT

`ಮಹಾವೀರ ಮಹಾದರ್ಶನ' ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 7:06 IST
Last Updated 24 ಏಪ್ರಿಲ್ 2013, 7:06 IST
ಮೈಸೂರಿನ ಕಲಾಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಯತ್ರಿ ಡಾ.ಲತಾ ರಾಜಶೇಖರ್ ರಚಿಸಿರುವ `ಮಹಾವೀರ ಮಹಾದರ್ಶನ' ಮಹಾಕಾವ್ಯವನ್ನು ಸಾಹಿತಿ ಡಾ.ಹಂಪ ನಾಗರಾಜಯ್ಯ ಲೋಕಾರ್ಪಣೆ ಮಾಡಿದರು. ಡಿ.ಹರ್ಷೇಂದ್ರಕುಮಾರ್, ಡಾ.ಎಚ್.ಬಿ.ರಾಜಶೇಖರ್, ಜೈನ ಮಠದ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದಿಗಂಬರ ಜೈನಮುನಿ ಸ್ವಾಮೀಜಿ ಇದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಯತ್ರಿ ಡಾ.ಲತಾ ರಾಜಶೇಖರ್ ರಚಿಸಿರುವ `ಮಹಾವೀರ ಮಹಾದರ್ಶನ' ಮಹಾಕಾವ್ಯವನ್ನು ಸಾಹಿತಿ ಡಾ.ಹಂಪ ನಾಗರಾಜಯ್ಯ ಲೋಕಾರ್ಪಣೆ ಮಾಡಿದರು. ಡಿ.ಹರ್ಷೇಂದ್ರಕುಮಾರ್, ಡಾ.ಎಚ್.ಬಿ.ರಾಜಶೇಖರ್, ಜೈನ ಮಠದ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದಿಗಂಬರ ಜೈನಮುನಿ ಸ್ವಾಮೀಜಿ ಇದ್ದಾರೆ.   

ಮೈಸೂರು: ಕವಯತ್ರಿ ಡಾ.ಲತಾ ರಾಜಶೇಖರ್ ರಚಿಸಿರುವ `ಮಹಾವೀರ ಮಹಾದರ್ಶನ' ಮಹಾಕಾವ್ಯವನ್ನು ನಗರದ ಕಲಾಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಹಂಪ ನಾಗರಾಜಯ್ಯ ಲೋಕಾರ್ಪಣೆ ಮಾಡಿದರು.

ಇದಕ್ಕೂ ಮುನ್ನ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಲ್ಪವೃಕ್ಷ ಟ್ರಸ್ಟ್, ದಿಗಂಬರ ಜೈನ ಸಮಾಜ, ಪದ್ಮಶ್ರೀ ಜೈನ ಮಹಿಳಾ ಬಳಗ ಹಾಗೂ ವಾಗ್ದೇವಿ ಪ್ರತಿಷ್ಠಾನದ ಆಶ್ರಯದಲ್ಲಿ ಮಹಾವೀರ ಪುತ್ಥಳಿ ಹಾಗೂ ಮಹಾವೀರ ಮಹಾದರ್ಶನ ಗ್ರಂಥವನ್ನು ಮೆರವಣಿಗೆಯಲ್ಲಿ ತರಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಜೈನ ಸಮುದಾಯ ದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ಪಂಚಕಳಶದೊಂದಿಗೆ ಹೆಜ್ಜೆ ಹಾಕಿ, ಜೈಕಾರ ಕೂಗಿದರು.

ಲತಾ ರಾಜಶೇಖರ್ ಅವರು ಈ ಮೊದಲು ಬುದ್ಧ ಮಹಾದರ್ಶನ, ಬಸವ ಮಹಾದರ್ಶನ, ಯೇಸು ಮಹಾದರ್ಶನ ಎಂಬ ಮೂರು ಮಹಾಕಾವ್ಯಗಳನ್ನು ರಚಿಸಿದ್ದು, `ಮಹಾವೀರ ಮಹಾದರ್ಶನ' ನಾಲ್ಕನೇ ಕೃತಿಯಾಗಿದೆ. ಇದೀಗ, ಶ್ರೀರಾಮನನ್ನು ಮರು ದಾಖಲಿಸುವ ಪ್ರಯತ್ನಕ್ಕೆ ಮುಂದಾಗಿದ್ದು, `ಶ್ರೀರಾಮ ಮಹಾ ಕಾವ್ಯ' ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿ ಬಿಡುಗಡೆ ಬಳಿಕ ಮಾತನಾಡಿದ ಸಾಹಿತಿ ಡಾ.ಹಂಪ ನಾಗರಾಜಯ್ಯ, `ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಸ್ಕೃತ ವಿಷಯಕ್ಕೆ ಪ್ರಾಧಾನ್ಯತೆ ಕೊಟ್ಟು, ಪ್ರಾಕೃತ ಭಾಷೆಯನ್ನು ಕಡೆಗಣಿಸಿವೆ. ಸಂಸ್ಕೃತದಷ್ಟೇ ಮಹತ್ವ ಮತ್ತು ಹಿನ್ನೆಲೆ ಪ್ರಾಕೃತ ಭಾಷೆಗೂ ಇದೆ. ಆದರೆ, ಪ್ರಾಕೃತಕ್ಕೆ ಸ್ಥಾನಮಾನ ಕೊಡುವಲ್ಲಿ ಸರ್ಕಾರ ಗಳು ಮನಸ್ಸು ಮಾಡಿಲ್ಲ. ಸರ್ಕಾರಕ್ಕೆ ವಾರ್ಷಿಕ ಶೇ 47 ರಷ್ಟು ತೆರಿಗೆ ಕಟ್ಟುವ ಜೈನರ ಬಗ್ಗೆ ಉಪೇಕ್ಷ ಭಾವನೆ ಸಲ್ಲದು' ಎಂದರು.

`ಕಾವ್ಯ ಸುಲಭವಾಗಿ ಎಲ್ಲರಿಗೂ ಒಲಿಯು ವುದಿಲ್ಲ. ಕವನಕ್ಕೆ ಛಂದಸ್ಸಿನ ಜತೆಗೆ ಸತ್ವ, ಕಾಂತಿಯನ್ನೂ ನೀಡಬೇಕು. ಅಂದಾಗ ಮಾತ್ರ ಕವನ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಲತಾ ರಾಜಶೇಖರ್ ಅವರ ಪ್ರಯತ್ನ ಶ್ಲಾಘನೀಯ. ನಾಲ್ಕು ಮಹಾಕಾವ್ಯಗಳನ್ನು ರಚಿಸಿರುವ ಅವರು, ಐದನೇ ಮಹಾಕಾವ್ಯದ ಸಿದ್ಧತೆಯಲ್ಲಿ ತೊಡಗಿರುವುದು ಅಭಿನಂದ ನೀಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರಕುಮಾರ್, ಪತ್ನಿ ಸುಪ್ರಿಯಾ ಅವರು ಮಹಾಕಾವ್ಯದ ಪ್ರಥಮ ಕೃತಿಯನ್ನು ಹಂಪ ನಾಗರಾಜಯ್ಯ ಅವರಿಂದ ಸ್ವೀಕರಿಸಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಕಾರ್ಯಕ್ರಮ ಉದ್ಘಾಟಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಜೈನ ಮಠದ ಭಾನುಕೀರ್ತಿ ಭಟ್ಟಾರಕ  ಪಟ್ಟಾಚಾರ್ಯ ಸ್ವಾಮೀಜಿ, ದಿಗಂಬರ ಜೈನಮುನಿ ಸ್ವಾಮೀಜಿ, ಸಾಹಿತಿ ಡಾ.ದೇಜಗೌ, ಡಾ.ಎಚ್.ಬಿ. ರಾಜಶೇಖರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಿಶ್ರಾಂತ ಕುಲಪತಿ ಡಾ.ಎಂ. ಮಹಾದೇವಪ್ಪ, ಧ್ವನ್ಯಾಲೋಕದ ನಿರ್ದೇಶಕ ಡಾ.ಸಿ.ಎನ್.ಶ್ರೀನಾಥ್, ವಿದ್ವಾಂಸ ಪ್ರೊ.ಜಿ. ಬ್ರಹ್ಮಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಕದಂಬ ರಂಗ ವೇದಿಕೆ ಕಲಾವಿದರು `ಅಹಿಂಸಾ ಪರಮೋಧರ್ಮ' ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT