ನಂಜನಗೂಡು: ‘ದಕ್ಷಿಣಕಾಶಿ’ ಎನಿಸಿರುವ ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಸ್ಥಳೀಯರು ಹಾಗೂ ನಾಡಿನ ನಾನಾ ಭಾಗ ದಿಂದ ಆಗಮಿಸಿದ್ದ ಹತ್ತಾರು ಸಾವಿರ ಸಂಖ್ಯೆಯ ಭಕ್ತರು ಸ್ವಾಮಿಯ ದರ್ಶನ ಪಡೆದು ಪುಳಕಿತರಾದರು. ಪಟ್ಟಣದ ಜನತೆ ಅದರಲ್ಲೂ ಹೆಚ್ಚಾಗಿ ಮಹಿಳೆಯರು, ಮಕ್ಕಳು ಬೆಳಗಿನಜಾವ ಮೂರು ಗಂಟೆಗೆಲ್ಲಾ ಮನೆಯಲ್ಲೇ ಸ್ನಾನಮಾಡಿ ದೇವಸ್ಥಾನದತ್ತ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜನಸಾಗರ ಹರಿದು ಬರುತ್ತಿದ್ದಂತೆ ಬೆಳಿಗ್ಗೆ 4 ಗಂಟೆಗೆ ದೇವಾಲಯದ ಮುಖ್ಯದ್ವಾರವನ್ನು ತೆರೆಯಲಾಯಿತು. ಸರದಿಯಲ್ಲಿ ನಿಂತಿದ್ದ ಭಕ್ತರು ಸ್ವಾಮಿಯ ದರ್ಶನಕ್ಕೆ ಮುಂದಾದರು. ಬೆಳಕು ಹರಿಯುತ್ತಿದ್ದಂತೆ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯಲು ಧಾವಿಸಿದ ಭಕ್ತರ ಸಂಖ್ಯೆಯೂ ಸೇರಿಕೊಂಡು ಸರದಿಯ ಸಾಲು ಹನುಮಂತನ ಬಾಲದಂತೆ ಬೆಳೆಯತೊಡಗಿತು.
ದೇವಾಲಯದ ಒಳಾವರಣದಲ್ಲಿ ಇರುವ ನೂರಕ್ಕೂ ಹೆಚ್ಚಿನ ಸಾಲು ದೇವರಿಗೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಕರ್ಪೂರ ಹಚ್ಚಿ ಭಕ್ತಿ ಮೆರೆದರು. ಇತ್ತ ಶ್ರೀಕಂಠೇಶ್ವರನ ದರ್ಶನಕ್ಕೆ ಸರದಿಯಲ್ಲಿ ನಿಂತವರ ಸಾಲು ದೇವಾಲಯದ ಹೊರಾವರಣದ ಸುತ್ತಲು ಆವರಸಿಕೊಂಡು ಬೆಳೆಯುತ್ತಲೇ ಸಾಗಿತು. ಕಳೆದ ಎರಡು ವರ್ಷದಂತೆ ಈ ಬಾರಿಯೂ ಬಿಜೆಪಿ ರಾಜ್ಯ ಸರ್ಕಾರ ಶಿವರಾತ್ರಿ ಆಚರಣೆಗೆ ಕಾಶಿಯ ‘ಗಂಗಾಜಲ’ವನ್ನು ಶಿವನ ದೇವಾಲಯಗಳಿಗೆ ಒದಗಿಸಿದೆ. ಅದರಂತೆ ಬೆಳಿಗ್ಗೆ 5 ಗಂಟೆಗೆ ಲಿಂಗಕ್ಕೆ 50 ಲೀಟರ್ ಗಂಗಾಜಲವನ್ನು ಅಭಿಷೇಕ ಮಾಡಲಾಯಿತು.
ಅಭಿಷೇಕದ ನೀರನ್ನು ತೀರ್ಥವಾಗಿ ಸಂಗ್ರಹಿಸಿ ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು. ಕ್ಷೀರಾಭಿಷೇಕ, ತುಪ್ಪ, ಮೊಸರು, ಎಳೆನೀರು, ಶಾಲ್ಯದ ಅನ್ನ, ಪಂಚಾಮೃತ ಇತ್ಯಾದಿ ಅಭಿಷೇಕಗಳು ನಡೆದವು. ಪ್ರತಿ ವರ್ಷದಂತೆ ಶ್ರೀಕಂಠೇಶ್ವರನ ಗುಡಿ ಮತ್ತು ಆಯ್ದಕಡೆ ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಆರಂಭವಾದ ಭಕ್ತರ ಆಗಮನ ಮಧ್ಯರಾತ್ರಿಯಾದರೂ ಮುಂದುವರೆದಿತ್ತು.
ಮಹಾ ಶಿವರಾತ್ರಿ ದಿವಸ ನಾಲ್ಕು ಜಾವಗಳಲ್ಲಿ ನಡೆಯುವ ಪೂಜೆಯು ವಿಶೇಷವೆನಿಸಿದೆ. ಅದರಂತೆ ಸಂಜೆ 6 ಗಂಟೆಗೆ ಒಂದನೇ ಜಾವ, ರಾತ್ರಿ 10ಕ್ಕೆ ಎರಡನೇ ಜಾವ, ಮಧ್ಯರಾತ್ರಿ 12ಕ್ಕೆ ಮೂರನೇ ಜಾವದ ಪೂಜೆ, ಪುನಸ್ಕಾರಗಳು ನಡೆದವು. ರಾತ್ರಿ 10ಗಂಟೆ ನಂತರ ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ನಡೆಯಿತು. ನಾಲ್ಕನೇ ಜಾವದ ಪೂಜೆಯು ಗುರುವಾರ ಬೆಳಗಿನ ಜಾವ 4 ಗಂಟೆಗೆ ನಡೆಯಲಿದೆ. ಬೆಳಿಗ್ಗೆ 7 ಗಂಟೆ ನಂತರ ಕೈಲಾಸ ವಾಹನ ಉತ್ಸವವು ಪಟ್ಟಣದ ರಥದ ಬೀದಿಗಳಲ್ಲಿ ಜರುಗಲಿದೆ. ನಂತರ ಮಹಾ ಮಂಗಳಾರತಿ ನಡೆಯಲಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ರಾಮಮೂರ್ತಿ ಮಹಾಶಿವರಾತ್ರಿ ಆಚರಣೆಯ ಉಸ್ತುವಾರಿ ವಹಿಸಿದ್ದರು.
ಜಾಗರಣೆ: ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿಯ ಜಾಗರಣೆ ಆಚರಣೆಗೆ ಪಟ್ಟಣ ಹಾಗೂ ಸುತ್ತ, ಮುತ್ತಲ ಊರುಗಳಿಂದ ಮಹಿಳೆಯರು, ಮಕ್ಕಳಾದಿಯಾಗಿ ಜನರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಜಾಗರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯದ ಮುಂಭಾಗ ಸಂಜೆ ಭರತನಾಟ್ಯ, ರಾತ್ರಿ ಭಕ್ತಿಗೀತೆ ಮತ್ತು ಜಾನಪದ ಗೀತೆ ಕಾರ್ಯಕ್ರಮ ಜರುಗಿತು. ಮಧ್ಯರಾತ್ರಿ ಶುರುವಾಗುವ ಶಿವಕಥಾ ಕಾಲಕ್ಷೇಪ ಬೆಳಗಿನ ಜಾವ ಅಂತ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.