ADVERTISEMENT

ಮಾನಸಿಕ ದಾಸ್ಯ ಅಪಾಯಕಾರಿ: ಮಹಾದೇವಪ್ಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:20 IST
Last Updated 15 ಮಾರ್ಚ್ 2011, 8:20 IST

ಮೈಸೂರು: ಸಮಾಜದಲ್ಲಿ ಎಲ್ಲರೊಂದಿಗೆ ಬದುಕುತ್ತಿರುವ ನಾವು ಭೌತಿಕ ದಾಸ್ಯಕ್ಕಿಂತಲೂ ಅಪಾಯ ಕಾರಿಯಾದ  ಮಾನಸಿಕ ದಾಸ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ಪಿಯು ಶಿಕ್ಷಣ ಇಲಾಖೆಯ ಬೆಂಗಳೂರಿನ ಜಂಟಿ ನಿರ್ದೇಶಕ ಆರ್.ಮಹಾದೇವಪ್ಪ  ಅಭಿಪ್ರಾಯಪಟ್ಟರು. ಪಿಯು  ಶಿಕ್ಷಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘ ಮೈಸೂರು ವಿಭಾಗದ ವತಿಯಿಂದ ನಗರದ ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರೋತ್ತರ ನಮ್ಮೆಲ್ಲರ ಹೋರಾಟಗಳು ಇನ್ನೂ ನಮಗೆ ತೃಪ್ತಿ ತಂದಿಲ್ಲ. ಯಾಕೆಂದರೆ ಅಂಬೇಡ್ಕರ್ ಅವರ ಹೋರಾಟದ ಫಲ ಉಣ್ಣುತ್ತಿರುವ ನಾವು ಅವರ ಆಶಯಗಳಿಗೆ ದ್ರೋಹ ಮಾಡುತ್ತಿದ್ದೇವೆ. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಜನರೊಂದಿಗೆ ನಾವು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದೇವೆ. ಇಂಥ ಕೀಳು ಮನೋಭಾವ ನಮಗೆ ನಾವು ಹಾಗೂ ನಮ್ಮವರಿಗೆ ಮೇಲಾಗಿ ಬಾಬಾ ಸಾಹೇಬರಿಗೆ ಎಸೆದ ಮಹಾದ್ರೋಹ ಎಂದು ವಿಷಾದ ವ್ಯಕ್ತಪಡಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ನಾವೆಲ್ಲ ಶಿಕ್ಷಣದ ಮಹತ್ವವನ್ನು ಅರಿತು ನಮ್ಮ ಒಳಗಿನ ಅಹಂಗಳನ್ನು ಕಳೆದುಕೊಂಡು ನಮ್ಮಲ್ಲಿ ಹಿಂದುಳಿದಿರುವವರಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸುವ ಕಾರ್ಯ ಕೈಗೊಳ್ಳಬೇಕಾಗಿದೆ.

ಅದಕ್ಕೆ ಮೊದಲು ನಾವು ವೈಚಾರಿಕವಾಗಿ ಶೈಕ್ಷಣಿಕವಾಗಿ ಸಬಲರಾಗಬೇಕು. ನಮ್ಮಲ್ಲಿ ಒಬ್ಬ ಸಬಲನಾದ ಬುದ್ಧಿವಂತ ನೂರಾರು ಜನತೆಗೆ ಸಮಾನನಾಗಿ ಮಾರ್ಗದರ್ಶನ ನೀಡಬಹುದು.ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹಾನ್ ಮಾನವತಾವಾದಿಗಳನ್ನು ಎಲ್ಲರೂ ಓದಬೇಕು. ಚಾತುರ್ವರ್ಣ ಪ್ರೇರಿತ ಜಾತಿವಾರು ವಿಷದ ಓದಿಗೆ ಮೀಸಲಾಗಬಾರದು. ಅಲ್ಲದೆ ಕೇವಲ ತಾಂತ್ರಿಕ, ಯಾಂತ್ರಿಕ ಶಿಕ್ಷಣ ಪಡೆದು ಜನಪರ ಸಂವೇದನೆಗಳಿಲ್ಲದೆ ಬಂಡವಾಳಶಾಹಿಗಳಾಗುವುದು ಅಪಾಯಕಾರಿಯಾದುದು. ಆದ್ದರಿಂದ ನಾವು ಹೆಚ್ಚು ಓದಿಕೊಂಡು ಜ್ಞಾನದೊಂದಿಗೆ ಹೃದಯವಂತಿಕೆಯನ್ನು ಮೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಲುವಯ್ಯ, ಉಪಾಧ್ಯಕ್ಷ ಮಹದೇವ ಮೂರ್ತಿ, ಜಂಟಿನಿರ್ದೇಶಕ ಮಹದೇವ್ ಮಾತನಾಡಿದರು. ಸೇವೆಗಳಲ್ಲಿ ಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾತು. ಪ್ರಾಂಶುಪಾಲರಾದ ಬಿ.ಮನೋಹರ, ಕೆ.ಎಂ.ಪುಟ್ಟು, ಎಂ.ರಾಚಯ್ಯ, ನಾಗಮಲ್ಲೇಶ್, ಉಪನ್ಯಾಸಕ ಟಿ.ಆರ್.ಸಿದ್ಧ ರಾಜು,ಮಂಗಳಮೂರ್ತಿ, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಉಪನ್ಯಾಸಕರು  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.