ADVERTISEMENT

ಮೀಸಲು ಕ್ಷೇತ್ರ: ಪಕ್ಷಕ್ಕಿಂತ ವ್ಯಕ್ತಿಗೆ ಮನ್ನಣೆ

ದಲಿತ ಸಮುದಾಯದ ಮತದಾರರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಚುನಾವಣೆಯ ಕಾವು

ಜಿ.ಬಿ.ನಾಗರಾಜ್
Published 7 ಏಪ್ರಿಲ್ 2018, 10:43 IST
Last Updated 7 ಏಪ್ರಿಲ್ 2018, 10:43 IST

ಮೈಸೂರು: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ನಾಲ್ಕು ಜಲಾಶಯಗಳನ್ನು ಹೊಂದಿರುವ ಎಚ್.ಡಿ.ಕೋಟೆ ವಿಧಾನಸಭಾ ಮೀಸಲು ಕ್ಷೇತ್ರದ ರಾಜಕೀಯ ಚದುರಂಗದಾಟದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೇ ಹೆಚ್ಚು ಮನ್ನಣೆ ಸಿಕ್ಕಿದೆ. ದಲಿತ ಸಮುದಾಯದ ಮತದಾರರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಚುನಾವಣೆಯ ಕಾವು ಬೇಸಿಗೆಯ ತಾಪಮಾನದಂತೆ ಏರುತ್ತಿದೆ.

ಆರಂಭದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಎಚ್‌.ಡಿ.ಕೋಟೆ ಸ್ವತಂತ್ರ ಕ್ಷೇತ್ರವಾಗಿರಲಿಲ್ಲ. ಅವಿಭಜಿತ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ದ್ವಿಸದಸ್ಯ ಕ್ಷೇತ್ರಕ್ಕೆ ಇದು ಸೇರಿತು. ಬಳಿಕ ಹುಣಸೂರು ದ್ವಿಸದಸ್ಯ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿತ್ತು.

1962ರಿಂದ ಈವರೆಗೆ ನಡೆದ 12 ಸಾರ್ವತ್ರಿಕ ಚುನಾವಣೆಯಲ್ಲಿ ಐದು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಪಕ್ಷ ಬದಲಿಸಿದ ಮುಖಂಡರನ್ನೂ ಮತದಾರರು ಕೈಹಿಡಿದಿದ್ದಾರೆ.

ADVERTISEMENT

ಕ್ಷೇತ್ರ ರಚನೆಯಾದಾಗ ಇದು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಾಗಿತ್ತು. 2008ರಲ್ಲಿ ಮೀಸಲಾತಿಯು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಬದಲಾಯಿತು. ಈವರೆಗೂ ಮೀಸಲಾತಿ ಕ್ಷೇತ್ರವಾಗಿಯೇ ಉಳಿದಿರುವ ಎಚ್‌.ಡಿ.ಕೋಟೆ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲೂ ಇದೆ.

2013ರಲ್ಲಿ ಕ್ಷೇತ್ರ ಬದಲಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಜೆಡಿಎಸ್‌ನ ಎಸ್‌.ಚಿಕ್ಕಮಾದು ಇದರಲ್ಲಿ ಸಫಲರಾಗಿದ್ದರು. ಶಾಸಕರಾಗಿದ್ದ ಅವರು ಚುನಾವಣೆಯ ಹೊಸ್ತಿಲಲ್ಲಿ ನಿಧನರಾಗಿದ್ದು ರಾಜಕೀಯ ಸ್ಥಿತ್ಯಂತರಗಳಿಗೂ ಕಾರಣವಾಯಿತು. ಇವರ ಎದುರಾಳಿಯಾಗಿ ಸೋಲು ಕಂಡಿದ್ದ ಚಿಕ್ಕಣ್ಣ ಅವರಿಗೆ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ.

ಚಿಕ್ಕಮಾದು ಅವರ ಪುತ್ರ ಸಿ.ಅನಿಲ್‌ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿ ಎಂಬ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್‌ನಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದ ಅವರು ಈಚೆಗೆ ರಾಜೀನಾಮೆ ಸಲ್ಲಿಸಿ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಕಣಕ್ಕೆ ಇಳಿದಿದ್ದ ಜೆ.ಕೆ.ಗೋಪಾಲ್ ಕೂಡ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿಯ ಟಿಕೆಟ್‌ಗೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಹಾಗೂ ಎಚ್‌.ವಿ.ಕೃಷ್ಣಸ್ವಾಮಿ ನಡುವೆ ಪೈಪೋಟಿ ನಡೆಯುತ್ತಿದೆ. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಂ.ರಾಮಚಂದ್ರ ಅವರ ಹೆಸರೂ ಬಲವಾಗಿ ಕೇಳಿಬರುತ್ತಿದೆ. ಈಚೆಗೆ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿ ಯಾರಿಗೆ ‘ಬಿ’ ಫಾರಂ ನೀಡುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆರ್‌.ಪೀರಣ್ಣ ಆರಂಭದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಪಕ್ಷ ಬದಲಾಯಿಸಿದರೂ ವಿಜಯಲಕ್ಷ್ಮಿ ಒಲಿದಿದ್ದಾಳೆ. 1967ರಿಂದ 1978ರವರೆಗೆ ಸತತವಾಗಿ ಮೂರುಬಾರಿ ಸೋಲು ಕಂಡಿದ್ದ ಎಚ್‌.ಬಿ.ಚಲುವಯ್ಯ 1983ರಲ್ಲಿ ಗೆಲುವು ಸಾಧಿಸಿದರು.

ಶಾಸಕರಾಗಿ ಆಯ್ಕೆಯಾಗಿದ್ದ ಎಂ.ಶಿವಣ್ಣ ಅವರು ಎಸ್‌.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ, ರಾಜ್ಯ ವಿತ್ತ ಖಾತೆ, ವಾರ್ತಾ ಮತ್ತು ಪ್ರಚಾರ, ತೋಟಗಾರಿಕೆ ಹಾಗೂ ಭಾರಿ ನೀರಾವರಿ ಖಾತೆಯನ್ನು ಅವರು ನಿರ್ವಹಿಸಿದ್ದಾರೆ.

ಕ್ಷೇತ್ರದ ವಿಶೇಷ

1952ರಲ್ಲಿ ಗುಂಡ್ಲುಪೇಟೆ, 1957ರಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರಕ್ಕೆ ಸೇರಿದ್ದ ಎಚ್‌.ಡಿ.ಕೋಟೆ

1962ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಘೋಷಣೆಯಾಯಿತು

2008ರಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲು ಕ್ಷೇತ್ರವಾಗಿ ಪರಿವರ್ತನೆ ಹೊಂದಿತು ಆರ್‌.ಪೀರಣ್ಣ ಸತತ ಮೂರು ಬಾರಿ, ಶಿವಣ್ಣ ಹಾಗೂ ಎಂ.ಪಿ.ವೆಂಕಟೇಶ್‌ ತಲಾ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.