ADVERTISEMENT

ಮುಕ್ತವಾಗಿ ಬದುಕಲು ಮನೋಸ್ಥೈರ್ಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:35 IST
Last Updated 15 ಅಕ್ಟೋಬರ್ 2012, 7:35 IST

ಮೈಸೂರು: ಮಹಿಳೆಯರು ಶಿಕ್ಷಣ ಪಡೆಯುವುದು, ನೌಕರಿ ಮಾಡುವುದನ್ನೇ ನಾವಿಂದು ಸಾಧನೆ ಎಂದುಕೊಂಡಿದ್ದೇವೆ. ಆದರೆ, ಅದರಾಚೆಗೂ ವಿಶಾಲವಾಗಿ ಹರಡಿಕೊಂಡಿರುವ ಬದುಕನ್ನು ಮುಕ್ತವಾಗಿ ಅನುಭವಿಸುವ ಮನೋಸ್ಥೈರ್ಯ ನಮ್ಮಲ್ಲಿ ಇನ್ನೂ ಬೆಳೆದಿಲ್ಲ ಎಂದು ವಕೀಲರಾದ ಮಂಜುಳಾ ಮಾನಸ ಬೇಸರ ವ್ಯಕ್ತಪಡಿಸಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ `ಡಾ. ಕೆ.ವಿ. ರಾಘವೇಂದ್ರರಾವ್ ಸಂಸ್ಮರಣ ಪ್ರಶಸ್ತಿ~ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಹೆಣ್ಣುಮಕ್ಕಳಿಗೆ ಶಿಕ್ಷಣ, ನೌಕರಿ ಕೊಡಿಸಿದರೆ ಪಾಲಕರ ಜವಾಬ್ದಾರಿ ಮುಗಿಯುತ್ತದೆ. ಆದರೆ, ಮಹಿಳೆಗೆ ಅದರ ಆಚೆಗೂ ಪ್ರಪಂಚ ಮುಕ್ತವಾಗಿ ತೆರೆದುಕೊಂಡಿದೆ. ಕುಟುಂಬದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಅದರ ಮಹತ್ವ ಅರಿವಾಗಲಿದೆ ಎಂದರು.

ಆತ್ಮ ಸ್ಥೈರ್ಯ ಇಲ್ಲದಿದ್ದರೆ ಯಾವುದೇ ಕಾಯ್ದೆ, ಕಾನೂನು ನೆರವಿಗೆ ಬರುವುದಿಲ್ಲ. ಕಾನೂನು ನಮಗೆ ಆಸ್ತಿ, ಮದವೆ, ವಿಚ್ಛೇದನ, ಸ್ವಾತಂತ್ರ್ಯ ಎಲ್ಲವನ್ನೂ ಕೊಡಿಸಬಲ್ಲದು. ಆದರೆ, ಬದುಕು ಕಟ್ಟಿ ಕೊಡುವುದಿಲ್ಲ. ನಮ್ಮ ಆತ್ಮಸ್ಥೈರ್ಯವೇ ನಮ್ಮ ಬದುಕು ಕಟ್ಟಿಕೊಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.

ಎಫ್‌ಪಿಎ ಇಂಡಿಯಾ ಉಪಾಧ್ಯಕ್ಷ ಉಮೇಶ್ ಆರಾಧ್ಯ ಮಾತನಾಡಿ, ಜನಸಂಖ್ಯಾ ಸ್ಫೋಟದ ಬಗ್ಗೆ ವಿಶ್ವವ್ಯಾಪಿ ಜಾಗೃತಿ ಆಂದೋಲನಗಳು ನಡೆಯುತ್ತಿವೆ. ಆದರೆ, ನಮ್ಮ ದೇಶದಲ್ಲಿ ಅದಕ್ಕಿಂತಲೂ ಗಂಭೀರವಾದ `ಎಚ್‌ಐವಿ ಸ್ಫೋಟ~ ನಿರಂತರವಾಗಿ ಆಗುತ್ತಿದೆ. ಮಹಿಳೆಯರು ಮಾನಸಿಕ ಶಿಸ್ತು ಬೆಳೆಸಿಕೊಂಡರೆ ಮಾತ್ರ ಈ ಮಾರಿಯಿಂದ ದೂರ ಉಳಿಯಬಹುದು ಎಂದರು.

ಇದೇ ವೇಳೆ ಎಫ್‌ಪಿಎ ಇಂಡಿಯಾದ ನಿಕಟಪೂರ್ವ ಅಧ್ಯಕ್ಷ ಡಾ. ಎಸ್.ಎನ್. ಹೆಗಡೆ ಅವರಿಗೆ `ಡಾ. ಕೆ.ವಿ. ರಾಘವೇಂದ್ರರಾವ್ ಸಂಸ್ಮರಣ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಎಫ್‌ಪಿಎ ಇಂಡಿಯಾ ಪೋಷಕ ಜಿ.ಎಸ್. ಭಟ್ಟ ಅಭಿನಂದನ ಭಾಷಣ ಮಾಡಿದರು.

ಮೈಸೂರು ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಬಿ. ಮಲ್ಲಿಕಾರ್ಜುನಸ್ವಾಮಿ, ಕಲಾ ಹಾಗೂ ವಾಣಿಜ್ಯ ಕಾಲೇಜಿನ ಪ್ರಂಶುಪಾಲ ಲಕ್ಷ್ಮಣಗೌಡ, ಎಫ್‌ಪಿಎ ಇಂಡಿಯಾ ಗೌರವ ಉಪಾಧ್ಯಕ್ಷೆ ಡಾ. ಕೆ.ಆರ್. ಸುಶೀಲ, ಕಾರ್ಯದರ್ಶಿ ಸಾದಿಕ್ ಪಾಷಾ, ಕಸಾಪ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.