ADVERTISEMENT

ಮುಗಿದ ಚುನಾವಣೆ; ಕೃಷಿಯತ್ತ ರೈತರ ಚಿತ್ತ

ಉಳುಮೆ ಮಾಡಿ ಜಮೀನನ್ನು ಹದಗೊಳಿ, ಬಿತ್ತನೆಗೆ ಮುಂದಾಗಿರುವ ರೈತರು

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:10 IST
Last Updated 17 ಮೇ 2018, 6:10 IST
ಹುಣಸೂರು ತಾಲ್ಲೂಕಿನ ಬೆಳ್ತೂರು ಗ್ರಾಮದಲ್ಲಿ ಬುಧವಾರ ಹದವಾದ ಮಳೆಗೆ ರೈತ ಜೋಡೆತ್ತುಗಳಿಂದ ಭೂಮಿ ಹದಗೊಳಿಸುತ್ತಿದ್ದಾರೆ
ಹುಣಸೂರು ತಾಲ್ಲೂಕಿನ ಬೆಳ್ತೂರು ಗ್ರಾಮದಲ್ಲಿ ಬುಧವಾರ ಹದವಾದ ಮಳೆಗೆ ರೈತ ಜೋಡೆತ್ತುಗಳಿಂದ ಭೂಮಿ ಹದಗೊಳಿಸುತ್ತಿದ್ದಾರೆ   

ಹುಣಸೂರು: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ವಿಧಾನ ಸಭಾ ಚುನಾವಣೆ ಗುಂಗಿನಿಂದ ಹೊರ ಬಂದು ಕೃಷಿ ಚಟುವಟಿಕೆ ಯತ್ತ ಮುಖಮಾಡಿದ್ದು, ಎಲ್ಲೆಡೆ  ಉಳುಮೆ ಮಾಡಿ ಜಮೀನನ್ನು ಹದಗೊಳಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಜನವರಿಯಿಂದ ಈವರೆಗೂ ಒಟ್ಟು 174.5 ಮಿ.ಮಿ ಮಳೆಯಾಗಿದೆ. ಮೇ 12ರಂದು 34.6 ಮಿ.ಮಿ. ಮಳೆಯಾದ್ದರಿಂದ ಕೃಷಿಕರಿಗೆ ಪೂರಕ ವಾತಾವರಣ ಸೃಷ್ಠಿಯಾಗಿದೆ ಎನ್ನುತ್ತಾರೆ ಕೇಂದ್ರ ತಂಬಾಕು ಇಲಾಖೆಯ ಹವಾಮಾನ ತಜ್ಞ ಈಶ್ವರ್‌.

ವಾಡಿಕೆಯಂತೆ ಎಪ್ರಿಲ್‌ನಲ್ಲಿ ತುಂತುರು ಮಳೆಯಾಗಿದ್ದು ಇದು ವಾಣಿಜ್ಯ ಬೆಳೆ ತಂಬಾಕಿಗೆ ಅನು ಕೂಲಕರವಾಗಿದೆ. ಈ ವೇಳೆ ಜಮೀ ನನ್ನು ಹದ ಮಾಡಿ ತಂಬಾಕು ನಾಟಿ ಮಾಡುವುದರಿಂದ ಸಸಿ ಉತ್ತಮ ವಾಗಿ ಬೇರು ಬಿಡಲು ಸಹಕಾರಿ ಆಗಿದೆ. ಜೂನ್‌ನಲ್ಲಿ ಮುಂಗಾರು  ಆರಂಭ ವಾಗುವುದರಿಂದ ಆ ಸಮಯದಲ್ಲಿ ರೈತರು ನಿಗದಿತ ಸಮಯಕ್ಕೆ ರಸಗೊಬ್ಬರ ನೀಡುವು ದರಿಂದ ಬೆಳೆ ಉತ್ತಮವಾಗಿ ಬರಲಿದೆ  ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಮೇ ಕಡೆ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗುವ ಎಲ್ಲ ನಿರೀಕ್ಷೆಗಳಿದ್ದು, ಮುಂಗಾರು ಆರಂಭ ವಾದ ಬಳಿಕ ಜೂನ್‌ ಮಧ್ಯ ಭಾಗದಲ್ಲಿ ಮಳೆ ಹಿಡಿಯುವ ಸಾಧ್ಯತೆಗಳಿದೆ. ಇದಲ್ಲದೆ ಸೆಪ್ಟೆಂಬರ್‌ ಅಂತ್ಯದಲ್ಲಿ ವಾಯುಭಾರ ಕುಸಿತದಿಂದ ಮಳೆ ಆಗಲಿದ್ದು, ತಂಬಾಕಿಗೆ ಈಬಾರಿ ಮಳೆ ಪೂರಕವಾಗಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಎಪ್ರಿಲ್ ಮತ್ತು ಮೇನಲ್ಲಿ ಹದವಾದ ಮಳೆಯಿಂದಾಗಿ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 19184 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ  ಬೀಜ ಬಿತ್ತನೆ ಮಾಡುವ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‌ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಯಾ ತಂಬಾಕು ಪ್ರಥಮ ಸ್ಥಾನದಲ್ಲಿದ್ದು, ನಂತರದಲ್ಲಿ ಮುಸುಕಿನ ಜೋಳಕ್ಕೆ ಇಲ್ಲಿನ ರೈತರು ಹೆಚ್ಚಿನ ಒತ್ತು ನೀಡುತ್ತಾರೆ. ಈ ಸಾಲಿನಲ್ಲಿ  ತಿಂಗಳ ಅವಧಿಯಲ್ಲಿ 16,100 ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ನಾಟಿ ಮಾಡಲಾಗಿದ್ದು, ಈ ತಿಂಗಳ ಅಂತ್ಯಕ್ಕೆ 25 ಸಾವಿರ ಹೆಕ್ಟೇರ್‌ ಗಡಿ ದಾಟುವ ಸಾಧ್ಯತೆಗಳಿದೆ ಎನ್ನುವರು.

ಮೇ ಮಧ್ಯ ಭಾಗದಲ್ಲಿ 1,100 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಮೇ ತಿಂಗಳ ಅಂತ್ಯಕ್ಕೆ 2000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿಯಲಿದೆ. ಉಳಿದಂತೆ ತೊಗರಿ 55 ಹೆಕ್ಟೇರ್‌, ಉದ್ದು 76 ಹೆಕ್ಟೇರ್‌, ಹೆಸರು 84 ಹೆಕ್ಟೇರ್‌, ಹಲಸಂದೆ 1240 ಹೆಕ್ಟೇರ್‌, ನೆಲಗಡಲೆ 480 ಹೆಕ್ಟೇರ್‌, ಎಳ್ಳು 65, ಹತ್ತಿ 1100 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ ಎಂದರು.

ತಾಲ್ಲೂಕಿನ ಹನಗೋಡು ಹೋಬಳಿ ಭಾಗದಲ್ಲಿ ದಶಕದ ಹಿಂದೆ ಅತಿ ಹೆಚ್ಚು ಹತ್ತಿ ಬೆಳೆಯಲಾಗುತ್ತಿತ್ತು. ನಂತರದಲ್ಲಿ ತಂಬಾಕು ಬೆಳೆ ಮೊರೆ ಹೋಗಿದ್ದರು.  ಈ ಬಾರಿ ಮತ್ತೆ ಹತ್ತಿ ಬಿತ್ತನೆ ಹೆಚ್ಚಾಗಿದೆ ಎಂದು ವೆಂಕಟೇಶ್‌ ಮಾಹಿತಿ ನೀಡಿದರು.

**
ಈ ಬಾರಿ ಹದವಾದ ಮಳೆಯಾಗಿದ್ದು ಕಳೆದ ಮೂರು ವರ್ಷದಿಂದ ಮಳೆ ಇಲ್ಲದೆ ಭೂಮಿ ಉಳುಮೆ ಮಾಡಿರಲಿಲ್ಲ. ಈ ಸಾಲಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದೇನೆ
- ಚನ್ನಪ್ಪ, ರೈತ, ಬೆಳ್ತೂರು ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.