ADVERTISEMENT

ಮುಸ್ಲಿಂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 6:10 IST
Last Updated 3 ಮೇ 2011, 6:10 IST

ಹುಣಸೂರು: ಅಲ್ಪಸಂಖ್ಯಾತ ಸಮುದಾಯದವರನ್ನು ಜೆಡಿಎಸ್ ಸ್ನೇಹಿತರಂತೆ ಕಾಣುತ್ತಿದ್ದು, ಚುನಾವಣೆ ಸಮಯದಲ್ಲಿ ರಾಜಕೀಯ ಲೆಕ್ಕಾಚಾರದಲ್ಲಿ ಏರುಪೇರಾಗಿ ಸ್ಥಳೀಯ ಚುನಾವಣೆಯಲ್ಲಿ ಸ್ಥಾನ ಕಲ್ಪಿಸುವಲ್ಲಿ ವ್ಯತ್ಯಾಸವಾಗಿದೆ. ಆದ್ದರಿಂದ ಅನ್ಯತಾ  ಭಾವಿಸಬೇಡಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರೂ ಆದ ವಿಧಾನಪರಿಷತ್ ಎಸ್.ಚಿಕ್ಕಮಾದು ಹೇಳಿದರು.

ಪಟ್ಟಣದ ಶಬ್ಬೀರ್ ನಗರದಲ್ಲಿ ಮುಸ್ಲಿಂ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದವರಿಗೆ ಜೆಡಿಎಸ್ ರಾಜಕೀಯ ಶ್ರೀರಕ್ಷೆಯಾಗಿದೆ. ಸ್ಥಳೀಯ ಚುನಾವಣಾ ಸಮಯದಲ್ಲಿ  ಅಧಿಕಾರ ಹಿಡಿಯುವ ಹಿನ್ನಲೆಯಲ್ಲಿ ಕೆಲವು ರಾಜಕೀಯ ಕಸರತ್ತು ಮಾಡಬೇಕಾಗಿ ಬಂತು. ಹುಣಸೂರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ  ಸಮಾಜಕ್ಕೆ ಸ್ಥಾನ ಕಲ್ಪಿಸುವಲ್ಲಿ ಸಮಸ್ಯೆ ಎದುರಾಯಿತು. ತಾ.ಪಂ. ಮತ್ತು ಗ್ರಾ.ಪಂಗಳಲ್ಲಿ ಈ ಸಮಾಜಕ್ಕೆ ಆದ್ಯತೆ ನೀಡಲಾಗಿತ್ತು ಎಂದರು.

 ಶಬ್ಬೀರ್ ನಗರದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಸಹೋದ್ಯೋಗಿ ಅಬ್ದುಲ್ ಅಜೀಂ ಅವರ ಅನುದಾನ ದಲ್ಲಿ ರೂ.3 ಲಕ್ಷ ನೀಡಲಾಗಿದೆ. ನನ್ನ ಅನುದಾನದಲ್ಲಿ ರೂ 3 ಲಕ್ಷ ನೀಡಲಿದ್ದು, ಉಳಿದ 6 ಲಕ್ಷವನ್ನು  ವಿವಿಧ ಶಾಸಕರ ಅನುದಾನದಿಂದ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಟಿ. ರಾಜಣ್ಣ ಮಾತನಾಡಿ, ಸಮುದಾಯ ಭವನ ನಿರ್ಮಿಸಲು ಜಿ.ಪಂ ಮಾಜಿ ಸದಸ್ಯ ಫಜಲುಲ್ಲಾ ಬೆನ್ನು ಹತ್ತಿದ್ದಾರೆ. ಯಾವುದೇ ಕೆಲಸ ಆಗಬೇಕಿದ್ದರೆ ಕೆಲಸದ ಹಿಂದೆ ಹೋಗಿ ಯಶಸ್ವಿಯಾಗಬೇಕು. ವಿಧಾನಪರಿಷತ್ ಸದಸ್ಯರ ಅನು ದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸುವುದರಿಂದ ಮುಸ್ಲಿಂ ಸಮು ದಾಯದ ಮಹಿಳೆಯರು ವಿವಿಧ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳಲು  ಅನುಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಫಜಲುಲ್ಲಾ ಮಾತನಾಡಿ, 2 ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳಬೇಕಿದ್ದ ಯೋಜನೆಗೆ ಅನುದಾನದ ಕೊರತೆ ಎದುರಾಗಿದ್ದು, ವಿಧಾನಪರಿಷತ್ ಸದಸ್ಯರು ಅನುದಾನ ನೀಡುವ ಭರವಸೆಯಿಂದ ಮತ್ತೊಂದು ಬಾರಿ ಆಸೆ ಚಿಗುರೊಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ಇಕ್ಬಾಲ್ ಬೇಗ್, ಮುಲ್ಲಾಗಳಾದ ಜಾಕಿರ್, ನಜೀರ್ ಆಹಮ್ಮದ್, ಮುಫ್ತಿಸಾಬ್, ಪುರಸಭೆ  ಸದಸ್ಯರಾದ ತಹಿರಾಬೇಗ್, ಶಫಿ, ಮೊಹಿಯುದ್ದಿನ್, ನಂಜಪ್ಪ, ಚಂದ್ರನಾಯ್ಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ಮುಖಂಡ ಗೋವಿಂದೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.