ADVERTISEMENT

ಮೃಗಾಲಯಕ್ಕೆ ದಾಖಲೆ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 9:23 IST
Last Updated 2 ಅಕ್ಟೋಬರ್ 2017, 9:23 IST
ಮೈಸೂರಿನ ಅರಮನೆ ವೀಕ್ಷಣೆಗೆ ಟಿಕೆಟ್‌ ಖರೀದಿಸಲು ಭಾನುವಾರ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು
ಮೈಸೂರಿನ ಅರಮನೆ ವೀಕ್ಷಣೆಗೆ ಟಿಕೆಟ್‌ ಖರೀದಿಸಲು ಭಾನುವಾರ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು   

ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮುಗಿದ ಮಾರನೇ ದಿನವೂ ಅರಮನೆಗಳ ನಗರಿಯಲ್ಲಿ ಜನಸಾಗರ. ದಸರೆ ಹಾಗೂ ವಾರಾಂತ್ಯ ರಜೆ ಕಾರಣ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಿದೆ.

ಚಾಮರಾಜೇಂದ್ರ ಮೃಗಾಲಯಕ್ಕೆ ಭಾನುವಾರ ದಾಖಲೆ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಒಂದೇ ದಿನ 40 ಸಾವಿರ ಪ್ರವಾಸಿಗರು ವೀಕ್ಷಿಸಿದ್ದು, ₹ 23.2 ಲಕ್ಷ ಆದಾಯ ಬಂದಿದೆ. 2015ರ ಅಕ್ಟೋಬರ್‌ 24ರಂದು 36 ಸಾವಿರ ಜನ ಮೃಗಾಲಯಕ್ಕೆ ಭೇಟಿ ನೀಡಿದ್ದು ಈ ಮೊದಲಿನ ದಾಖಲೆ ಆಗಿತ್ತು. ಆಗ ₹ 20.3 ಲಕ್ಷ ಆದಾಯ ಸಂಗ್ರಹವಾಗಿತ್ತು. ‌

‘ದಸರಾ ಮಹೋತ್ಸವ ಪ್ರಾರಂಭವಾದ ಮೇಲೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ವಿಜಯದಶಮಿಯಂದು 32 ಸಾವಿರ ಜನ ಭೇಟಿ ನೀಡಿದ್ದು ₹ 18.8 ಲಕ್ಷ ಆದಾಯ ಬಂದಿದೆ. ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದೆವು’ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅರಮನೆ, ಚಾಮುಂಡಿಬೆಟ್ಟ, ಕೃಷ್ಣರಾಜಸಾಗರ (ಬೃಂದಾವನ) ಹಾಗೂ ನಂಜಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿದವರ ಸಂಖ್ಯೆಯೂ ಹೆಚ್ಚಿದೆ. ದಸರಾ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

ಅಂಬಾವಿಲಾಸ ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಜನಸಾಗರ. ರತ್ನಖಚಿತ ಸಿಂಹಾಸನ ವೀಕ್ಷಿಸಿ ಸಂಭ್ರಮಿಸಿದರು. ಸಂಜೆಯ ಮಳೆಯಲ್ಲಿ ನಗರದ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಿ ಖುಷಿಪಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅ.8ರ ವರೆಗೆ ದೀಪಾಲಂಕಾರ ವಿಸ್ತರಿಸಲಾಗಿದೆ.

ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ಅ. 8ರ ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಕೇರಳ, ತಮಿಳುನಾಡಿನಿಂದ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.