ADVERTISEMENT

ಯಶಸ್ವಿನಿ: ಜಿಲ್ಲೆಯಲ್ಲಿ 2 ಲಕ್ಷ ಸದಸ್ಯತ್ವ ಗುರಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 8:20 IST
Last Updated 17 ಮಾರ್ಚ್ 2011, 8:20 IST

ಮೈಸೂರು: ‘ಯಶಸ್ವಿನಿ ಸಹಕಾರಿ ರೈತ ಆರೋಗ್ಯ ರಕ್ಷಣಾ ಯೋಜನೆಯನ್ನು 2011-12 ನೇ ಸಾಲಿನ ಸದಸ್ಯರ ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ಮೇ 31 ಕ್ಕೆ ಅಂತ್ಯಗೊಳ್ಳಲಿದೆ’ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ ಬುಧವಾರ   ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು, ‘ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 2 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿಯನ್ನು ಹೊಂದಲಾಗಿದೆ. ಆದ್ದರಿಂದ ರೈತರು ಹೆಚ್ಚಿನ ಆಸಕ್ತಿ ವಹಿಸಿ ಸದಸ್ಯತ್ವ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಗ್ರಾಮಾಂತರ ಪ್ರದೇಶದ ಯಾವುದೇ ಸಹಕಾರ ಸಂಘ/ಬ್ಯಾಂಕಿನ ಸದಸ್ಯರಾಗಿ ಕನಿಷ್ಠ 6 ತಿಂಗಳುಗಳ ಅವಧಿಯನ್ನು ಪೂರ್ಣಗೊಳಿಸಿರುವ ಅವಿಭಕ್ತ ಕುಟುಂಬದ ಸದಸ್ಯರೆಲ್ಲರೂ ಯೋಜನೆಗೆ ಸದಸ್ಯರಾಗಬಹುದು. ವಾರ್ಷಿಕ ರೂ.160 ಗಳನ್ನು ಪಾವತಿಸಬೇಕು. ಗ್ರಾಮಾಂತರ ಭಾಗದಲ್ಲಿರುವ ಸಹಕಾರ ಸಂಘ/ ಬ್ಯಾಂಕಿನ ಸದಸ್ಯರು ತಾವು ಸದಸ್ಯರಾಗಿರುವ ಸಂಘ/ ಬ್ಯಾಂಕನ್ನು ಸಂಪರ್ಕಿಸಿ ಹಣ ಸಂದಾಯ ಮಾಡಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬಹುದು. ನಿಗದಿತ ಅರ್ಜಿ ನಮೂನೆಯೊಂದಿಗೆ ಕಡ್ಡಾಯವಾಗಿ ಒಂದು ಭಾವಚಿತ್ರ ಒದಗಿಸಬೇಕು. ಅರ್ಜಿಯಲ್ಲಿ ಕೋರಿರುವ ಪೂರ್ಣ ಮಾಹಿತಿಯನ್ನು ನೀಡಬೇಕು’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2003-04 ರಲ್ಲಿ 1,04,616 ಸದಸ್ಯರೊಂದಿಗೆ ಈ ಯೋಜನೆ ಆರಂಭವಾಯಿತು. 2010-11ನೇ ಸಾಲಿನಲ್ಲಿ 3 ಲಕ್ಷ ಸದಸ್ಯತ್ವ ಗುರಿ ಹೊಂದಿ, 1.69,966 ರಷ್ಟು ನೋಂದಣಿ ಮಾಡಿಕೊಳ್ಳಲಾಗಿದೆ.    ಸದಸ್ಯರಿಂದ 2.37 ಕೋಟಿ ವಂತಿಗೆ ಸಂಗ್ರಹಿಸಿ, 2.43 ಕೋಟಿಗಳನ್ನು ಆಸ್ಪತ್ರೆಗಳಿಗೆ ವೆಚ್ಚ ಮಾಡಲಾಗಿದೆ.  ಪ್ರಸಕ್ತ ಸಾಲಿನಲ್ಲಿ     ಸದಸ್ಯತ್ವ ಸಂಖ್ಯೆಯನ್ನು 2 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. 2010-11 ನೇ ಸಾಲಿನಲ್ಲಿ 2277 ಮಂದಿ ಶಸ್ತ್ರಚಿಕಿತ್ಸೆ ಪಡೆದಿದ್ದರೆ, ಹೊರರೋಗಿಗಳಾಗಿ 5665 ಮಂದಿ ಚಿಕಿತ್ಸೆ         ಪಡೆದಿದ್ದಾರೆ’ ಎಂದು ತಿಳಿಸಿದರು.

ಚಿಕಿತ್ಸೆ ಪಡೆಯುವ ವಿಧಾನ
‘ನೋಂದಾಯಿತ ಸದಸ್ಯರು ಸಂಬಂಧಿಸಿದ ಆಸ್ಪತ್ರೆಗೆ ಸಂಪರ್ಕಿಸುವಾಗಲೇ ತಮ್ಮ ಗುರುತಿನ ಚೀಟಿಯನ್ನು ಹಾಜರುಪಡಿಸಿ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲ ಆಸ್ಪತ್ರೆಗಳಲ್ಲೂ

ಪ್ರತ್ಯೇಕವಾಗಿ ಯಶಸ್ವಿನಿ   ಕೌಂಟರ್‌ಗಳನ್ನು ತೆರೆಯಲಾಗಿದೆ. ಕೌಂಟರ್‌ಗಳಿಗೆ ಸಂಪರ್ಕಿಸಿ ನೋಂದಣಿಯಾದ ನಂತರ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಲು ಅವಕಾಶ ಮಾಡಿಕೊಡಲಾಗುತ್ತದೆ. ವೈದ್ಯರ ತಪಾಸಣೆ ನಂತರ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ವೈದ್ಯರೆ ಶಸ್ತ್ರಚಿಕಿತ್ಸೆ ಮಾಡುವ ಅನುಮತಿ ಕೋರಿ ಇಂಡಿಯಾ ಮೆಡಿಸಿಸ್ಟ್ ಸಂಸ್ಥೆಗೆ ಫ್ಯಾಕ್ಸ್ ಮೂಲಕ ಕೋರಲು ಅವಕಾಶವಿದೆ. ಅನುಮತಿ ದೊರೆತ ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ಕ್ರಮವನ್ನು ಅನುಸರಿಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT