ADVERTISEMENT

ಯುವತಿಗೆ ಬಣ್ಣ ಎರಚಿ ಬಂಧಿಯಾಗಿದ್ದ ಅಖಿಲೇಶ್!

ಮೈಸೂರಿಗೆ ಉತ್ತರಪ್ರದೇಶ ಸಿಎಂ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:25 IST
Last Updated 15 ಜೂನ್ 2013, 6:25 IST

ಮೈಸೂರು: ಅಂದು ಮೈಸೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಸಹೋದರಿ ಮೇಲೆ ಬಣ್ಣ ಎರಚಿ, ದಿನವಿಡೀ ಲಾಕಪ್‌ನಲ್ಲಿ ಬಂಧಿತನಾಗಿದ್ದ ವಿದ್ಯಾರ್ಥಿ ಇಂದು ಮುಖ್ಯಮಂತ್ರಿ! ಅಷ್ಟೇ ಅಲ್ಲ, ಮಾಡದ ತಪ್ಪಿಗೆ ಮೂರು ಬಾರಿ ಫೇಲಾಗಿದ್ದೂ ಉಂಟು.

-ಇವು, ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿದ್ಯಾರ್ಥಿ ಜೀವನದಲ್ಲಿ ನಡೆದ ಎರಡು ಪ್ರಮುಖ ಘಟನೆಗಳು. ಉತ್ತರ ಭಾರತದಲ್ಲಿ ಅದ್ದೂರಿಯಿಂದ ಆಚರಿಸುವ ಹಬ್ಬಗಳಲ್ಲಿ ಹೋಳಿಯೂ ಒಂದು. ಎಸ್‌ಜೆಸಿಇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ಮುಖ್ಯಮಂತ್ರಿ ಪುತ್ರ ಅಖಿಲೇಶ್, ಗೆಳೆಯರ ಜತೆ ಸೇರಿ ಯುವತಿಯ ಮೇಲೆ ಬಣ್ಣ ಎರಚಿ ಬಂಧಿತನಾಗಿದ್ದ ವಿಷಯವನ್ನು ಅವರಿಗೆ ಗಣಿತಶಾಸ್ತ್ರ ಬೋಧಿಸುತ್ತಿದ್ದ ಪ್ರಾಧ್ಯಾಪಕ ಪ್ರೊ.ಚಾಮರಾಜ ನೆನಪಿಕೊಂಡರು.

ಕಾಲೇಜಿನ ಕ್ಯಾಂಪಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಚಾಮರಾಜ, ವಿದ್ಯಾರ್ಥಿಯಾಗಿದ್ದಾಗ ಅಖಿಲೇಶ್, ಏನೆಲ್ಲ ಮಾಡುತ್ತಿದ್ದರು ಎಂಬುದನ್ನು ಬಿಡಿಸಿಟ್ಟರು.

ಛಾಪಾ ಕಾಗದ: `ರಸ್ತೆಯಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದಳು. ಅಖಿಲೇಶ್ ಸ್ನೇಹಿತರು ಅವಳ ಮೇಲೆ ಬಣ್ಣ ಎರಚಿದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಸಹೋದರ, ಹಿರಿಯ ಪೊಲೀಸ್ ಅಧಿಕಾರಿ ಎಲ್ಲರನ್ನೂ ಸರಸ್ವತಿಪುರಂ ಲಾಕಪ್‌ಗೆ ತಳ್ಳಿದರು. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬಂಧಿತರಾಗಿದ್ದ ಎಲ್ಲರನ್ನೂ ಎರಡು ರೂಪಾಯಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆಪತ್ರ ಬರೆದುಕೊಟ್ಟು ಬಿಡಿಸಿಕೊಂಡು ಬಂದಿದ್ದೆ' ಎಂದು ನಗುತ್ತಲೇ ಹೇಳಿದರು.

ಕಲ್ಲಪ್ಪ ಮೇಷ್ಟ್ರ ಕಥೆ: ಅಖಿಲೇಶ್‌ಗೆ ಭೂವಿಜ್ಞಾನ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕರನ್ನು ವಿದ್ಯಾರ್ಥಿಗಳೆಲ್ಲ ತಮಾಷೆಯಿಂದ `ಕಲ್ಲಪ್ಪ ಮೇಷ್ಟ್ರು' ಎಂದು ಕರೆಯುತ್ತಿದ್ದರು. ಅದೊಂದು ದಿನ, ಪ್ರಾಧ್ಯಾಪಕರು ಗಂಭೀರವಾಗಿ ಪಾಠ ಮಾಡುತ್ತಿದ್ದರು. ಅಖಿಲೇಶ್ ಸ್ನೇಹಿತರೊಬ್ಬರು ಜೋರಾಗಿ `ಕಲ್ಲಪ್ಪ' ಎಂದು ಕರೆದು ಕುಳಿತುಕೊಂಡು ಬಿಟ್ಟರು. ತಮ್ಮನ್ನು ಕಲ್ಲಪ್ಪ ಎಂದು ಕರೆದಿದ್ದು ಅಖಿಲೇಶ್ ಎಂದು ಭಾವಿಸಿದ್ದ ಪ್ರಾಧ್ಯಾಪಕರು ಅವರನ್ನು ಮೂರು ಬಾರಿ ನಪಾಸು ಮಾಡಿದ್ದರು. ಬಳಿಕ, ಮತ್ತೊಬ್ಬ ಪ್ರಾಧ್ಯಾಪಕರ ರಾಜಿ-ಸಂಧಾನದಿಂದ ಪಾಸು ಮಾಡಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.