ADVERTISEMENT

ರೈತರಲ್ಲಿ ಧೈರ್ಯ ತುಂಬಿರಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 7:32 IST
Last Updated 4 ಅಕ್ಟೋಬರ್ 2017, 7:32 IST

ಮೈಸೂರು: ಬರದಿಂದ ಕಂಗೆಟ್ಟಿರುವ ಕೃಷಿಕರ ಬಳಿ ಅಧಿಕಾರಿಗಳು ತೆರಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದು ಕೃಷಿ ಸಚಿವ ಸಿ.ಕೃಷ್ಣ ಭೈರೇಗೌಡ ಸೂಚನೆ ನೀಡಿದರು.

ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶಗಳಾದ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಬಿತ್ತನೆಯಾಗದೇ ಉಳಿದಿರುವ ಖಾಲಿ ಭೂ ಪ್ರದೇಶ ಹಾಗೂ ಹಿಂಗಾರು ಹಂಗಾಮಿನಲ್ಲಿ ನಡೆಯಬೇಕಿರುವ ಬಿತ್ತನೆ ಹಾಗೂ ಬೆಳೆ ಉತ್ಪದನೆಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ಕೃಷಿ ಅಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರೈತರ ಭೂಮಿ ಬರಡಾಗಿ ಉಳಿದರೆ ಅವರ ಆತ್ಮ ಸ್ಥೈರ್ಯ ಕುಗ್ಗುತ್ತದೆ. ಆದರೆ, ರೈತರು ಭೂಮಿಯನ್ನು ಬರಡು ಬಿಡದೆ ಪರ್ಯಾಯವಾಗಿ ಯಾವ ಬೆಳೆ ಬೆಳೆಯಬಹುದು ಎಂದು ಅವರಲ್ಲಿ ಅರಿವು ಮೂಡಿಸಬೇಕು. ಇದಕ್ಕಾಗಿ ಗ್ರಾಮ ಹಾಗೂ ಹೋಬಳಿವಾರು ಕೃಷಿ ಅಧಿಕಾರಿಗಳು ಕ್ಷೇತ್ರ ಪ್ರವಾಸ ಕೈಗೊಂಡು ರೈತರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ADVERTISEMENT

ಈ ಕೆಲಸವನ್ನು ಮಾಡದೇ ಇದ್ದಲ್ಲಿ, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಜಂಟಿ ಕೃಷಿ ನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಮೂಲದಿಂದಲೇ ಕೆಲಸ ಆರಂಭಿಸಬೇಕು. ಗ್ರಾಮಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಬೆಳೆಯ ಬಿತ್ತನೆಯ ಬಗ್ಗೆ ಜಾಗೃತಿ ಮೂಡಿಸಬೇಕು. ನಂತರ ಅವರಿಗೆ ಬೇಕಿರುವ ಬಿತ್ತನೆ ಬೀಜವನ್ನು ದೊರಕುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ರೈತರಿಗೆ ತಮ್ಮ ಭೂಮಿಯಲ್ಲಿರುವ ಮಣ್ಣಿನ ಬಗ್ಗೆ ತಿಳಿದುಕೊಳ್ಳಲು ಈಗಾಗಲೇ ಬಹಳಷ್ಟು ರೈತರಿಗೆ ‘ಮಣ್ಣು ಆರೋಗ್ಯ ಚೀಟಿ’ಯನ್ನು ವಿತರಿಸಲಾಗಿದೆ. ಆದರೆ, ರೈತರಿಗೆ ಈ ಚೀಟಿಯ ಉಪಯುಕ್ತತೆಯ ಬಗ್ಗೆ ಸರಿಯಾಗಿ ತಿಳಿದಿಲ್ಲ. ಈ ಬಗ್ಗೆ ರೈತರಿಗೆ ಹಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದರು.

ಕಾರ್ಯಾಗಾರದಲ್ಲಿ ಕೃಷಿ ಇಲಾಖೆ ಆಯುಕ್ತರ ಡಾ.‌ಸತೀಶ, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.