ADVERTISEMENT

ರೈತರ ಮೊಗದಲ್ಲಿ ನಗು ತಂದ ಎಳನೀರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 6:22 IST
Last Updated 14 ಜುಲೈ 2013, 6:22 IST

ಸಾಲಿಗ್ರಾಮ: ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಈಚೆಗೆ ಆರಂಭವಾಗಿರುವ `ಎಳನೀರು ಮಾರಾಟ ಕೇಂದ್ರ'ವು ರೈತರ ವೆಾಗದಲ್ಲಿ ಮಂದಹಾಸ ಮಿಂಚಿಸಿದೆ.

ಮೈಸೂರು ಜಿಲ್ಲೆಯಲ್ಲಿ ಕೆ.ಆರ್.ನಗರ ತಾಲ್ಲೂಕು ಬತ್ತದ ಕಣಜ ಎಂಬ ಖ್ಯಾತಿ ಪಡೆದಿದೆ. ಆದರೆ ಕಳೆದ ವರ್ಷ ವರುಣನ ಅವಕೃಪೆಯಿಂದಾಗಿ ರೈತ ಸಮುದಾಯ ಕಂಗಾಲಾಗಿತ್ತು. ಸಾಲಿಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಎಳನೀರು ಮಾರಾಟ ಕೇಂದ್ರ ಶುರುವಾಗಿರುವುದು ರೈತರ ವೆಾಗದಲ್ಲಿ ನಗು ತಂದಿದೆ.

ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ, ಮಿರ್ಲೆ, ಹೊಸ ಅಗ್ರಹಾರ ಮತ್ತು ಚುಂಚನಕಟ್ಟೆ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಿಂದ ಪ್ರತಿ ದಿನ ಸುಮಾರು 10 ಸಾವಿರಕ್ಕೂ ಅಧಿಕ ಎಳನೀರನ್ನು ಗೂಡ್ಸ್ ಆಟೋ ಮತ್ತು ಎತ್ತಿನಗಾಡಿಗಳಲ್ಲಿ ರೈತರು ತರುತ್ತಿದ್ದಾರೆ. ಹೊಸದಾಗಿ ಶುರು ಮಾಡಿರುವ ಎಳನೀರು ಮಾರಾಟ ಕೇಂದ್ರದಲ್ಲಿ ಒಬ್ಬ ಮಧ್ಯವರ್ತಿ ಮಾತ್ರ ಎಳನೀರು ಖರೀದಿ ಮಾಡುತ್ತಿದ್ದು, 1ಎಳನೀರಿಗೆ ಕನಿಷ್ಠ ರೂ 10ರಿಂದ ಗರಿಷ್ಠ ರೂ 12.50 ನೀಡುತ್ತಿದ್ದಾರೆ.

ತೆಂಗಿನ ಬೆಳೆ ನಂಬಿ ಜೀವನ ನಿರ್ವಹಿಸುತ್ತಿರುವ ರೈತರು ಈ ಹಿಂದೆ ಎಳನೀರು ಮಾರಾಟ ಮಾಡಲು ಮುಂದಾದರೆ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದರು. ಎಳನೀರು ಮಾರಾಟ ಕೇಂದ್ರ ಶುರುವಾಗಿರುವ ಹಿನ್ನೆಲೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ ಎಂದು ಮಿರ್ಲೆ ಹೋಬಳಿಯ ಮೇಲೂರು ಗ್ರಾಮದ ತೆಂಗು ಬೆಳೆಗಾರ ತುಳಸೀರಾಮೇಗೌಡ ಸಂತಸ ವ್ಯಕ್ತಪಡಿಸಿದರು.

ಸಾಲಿಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಿರುವ ಎಳನೀರು ಮುಂಬಯಿ, ಪುಣೆ, ರಾಜಸ್ತಾನದ ಜೈಪುರ್, ನಾಸಿಕ್, ಔರಂಗಾಬಾದ್ ಅಲ್ಲದೇ, ರಾಜಧಾನಿ ನವದೆಹಲಿಗೂ ತಲುಪುತ್ತಿದೆ. ಆ ನಗರಗಳಲ್ಲಿ ಎಳನೀರಿಗೆ ಬಹಳ ಬೇಡಿಕೆ ಇರುವುದಾಗಿ ಖರೀದಿ ಮಾಡುತ್ತಿರುವ ಮಧ್ಯವರ್ತಿ ಹಫ್‌ತ್ತಾಭ್ ತಿಳಿದರು.

ಬತ್ತದ ಕಣಜ ಖ್ಯಾತಿಯ ಕೆ.ಆರ್.ನಗರ ತಾಲ್ಲೂಕಿನ 4 ಹೋಬಳಿ ವ್ಯಾಪ್ತಿಯ ಬಹುತೇಕ ರೈತರು ಬತ್ತಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಪರ್ಯಾಯ ಬೆಳೆ ತೆಗೆಯಲು ಚಿಂತಿಸುತ್ತಿರುವ ಈ ದಿನಗಳಲ್ಲಿ ಸಾಲಿಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಎಳನೀರು ಮಾರಾಟ ಕೇಂದ್ರವನ್ನು ಶುರು ಮಾಡಿರುವುದು ರೈತರಿಗೆ ಉತ್ತೇಜನ ನೀಡಿದಂತೆ ಆಗಿದೆ. ಇದನ್ನು ಮುಂದುವರಿಸಿ ಕೊಂಡು ಹೋಗುವ ಜತೆಗೆ ತೆಂಗು ಬೆಳೆಗಾರರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ರಮೇಶ್ ಹೇಳಿದರು.
ಸಾಲಿಗ್ರಾಮ ಯಶವಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.