ADVERTISEMENT

ಲಾರಿ ಚಾಲಕನ ಮಗಳಿಗೆ ಐಎಎಸ್ ಕನಸು!

​ಪ್ರಜಾವಾಣಿ ವಾರ್ತೆ
Published 24 ಮೇ 2012, 6:45 IST
Last Updated 24 ಮೇ 2012, 6:45 IST

ಮೈಸೂರು: ಲಾರಿ ಚಾಲಕನ ಮಗಳಿಗೆ ಐಎಎಸ್‌ಎಸ್ ಅಧಿಕಾರಿ ಆಗುವ ಕನಸು. ಜೆರಾಕ್ಸ್ ಅಂಗಡಿ ಮಾಲೀಕನ ಮಗಳಿಗೆ ಐಎಸ್‌ಎಸ್/ಚಾರ್ಟರ್ಡ್ ಅಕೌಂಟೆಂಟ್ ಆಗುವ ಬಯಕೆ. ಭದ್ರತಾ ಸಿಬ್ಬಂದಿ ಮಗಳಿಗೆ ಉನ್ನತ ಅಧಿಕಾರಿಯಾಗುವ ಹಂಬಲ.

-ಇವು ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರ ಕನಸು.

ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಎಸ್.ಮಾನಸ 561 (ಶೇ 93.5) ಅಂಕ ಪಡೆದಿದ್ದು, ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಲ್.ಐಶ್ವರ್ಯ ರಾವ್ 576 ಅಂಕ ಪಡೆದಿದ್ದಾರೆ. ಸ್ವಾಮಿ ವಿವೇಕಾ ನಂದ ಶಿಕ್ಷಣ ಸಂಸ್ಥೆಯ (ಎಸ್‌ವಿಇಐ) ವಿದ್ಯಾರ್ಥಿನಿ ಪ್ರಿನ್ಸಿ ಡಿ~ಸೋಜಾ ವಾಣಿಜ್ಯ ವಿಭಾಗದಲ್ಲಿ  585 ಅಂಕ (ಶೇ 97.5) ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ.

ಶಿಕ್ಷಣವನ್ನು ಆದ್ಯತಾ ವಲಯಕ್ಕೆ ಸೇರಿಸಿದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಪರಿಣಾಮ ಬಡ ವಿದ್ಯಾರ್ಥಿ ಗಳೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

ಐಎಎಸ್ ಅಧಿಕಾರಿ ಆಗಬೇಕು
ದಿನಕ್ಕೆ 3 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷಾ ಸಮಯದಲ್ಲಿ 6 ರಿಂದ 8 ಗಂಟೆ ಅಧ್ಯಯನ ಮಾಡಿದೆ. ಮನೆಪಾಠಕ್ಕೆ ಹೋಗದೆ 561 ಅಂಕ ಗಳಿಸಿದ್ದೇನೆ. ಮರಿಮಲ್ಲಪ್ಪ ಕಾಲೇಜಿನಲ್ಲೇ ಬಿ.ಎ ಅಧ್ಯಯನ ಮುಂದುವ ರಿಸುತ್ತೇನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 545 ಅಂಕ ಬಂದಿತ್ತು. ತಂದೆ- ತಾಯಿಯ ಸಹಕಾರ, ಪ್ರೋತ್ಸಾಹ ಮರೆ ಯುವಂತಿಲ್ಲ. ತಂದೆ ಎನ್.ಶಂಕರ ಲಾರಿ ಚಾಲಕರಾಗಿದ್ದು, ತಾಯಿ ಜಾನಕಿ ಗೃಹಿಣಿ. ತಂದೆ ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ಹೀಗಾಗಿ ನನ್ನನ್ನು  ಚೆನ್ನಾಗಿ ಓದಿಸುತ್ತಿದ್ದಾರೆ. ನಾನು ಐಎಎಸ್ ಅಧಿಕಾರಿ ಆಗಬೇಕು ಎಂಬುದು ಅವರ ಆಸೆ. ಕಷ್ಟಪಟ್ಟು ಓದಿ, ಮುಂದೊಂದು ದಿನ ಐಎಎಸ್ ಅಧಿಕಾರಿ ಆಗುತ್ತೇನೆ.
-ಎಸ್.ಮಾನಸ, ಮರಿಮಲ್ಲಪ್ಪ ಕಾಲೇಜು

ಐಎಎಸ್ ಅಧಿಕಾರಿಯತ್ತ ಚಿತ್ತ
ವಾಣಿಜ್ಯ ವಿಭಾಗದಲ್ಲಿ 576 ಅಂಕ ಪಡೆದಿದ್ದೇನೆ. ಮನೆಪಾಠ ಗೊತ್ತೇ ಇಲ್ಲ. ಏನಿದ್ದರೂ ಮನೆಯಲ್ಲೇ ಓದಿದ್ದು, ಜೊತೆಗೆ ಶಿಕ್ಷಕರ ಸಹಕಾರ, ಪ್ರೋತ್ಸಾಹ ಯಾವತ್ತೂ ಮರೆಯು ವಂತಿಲ್ಲ. (ಚಾರ್ಟರ್ಡ್ ಅಕೌಂಟೆಂಟ್)ಆಗಬೇಕು ಎಂಬುದು ನನ್ನ ಬಯಕೆ.

ಆದರೆ ತಂದೆಗೆ ನಾನುಐಎಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇದೆ. ತಂದೆ ಲಕ್ಷ್ಮಣ್‌ರಾವ್ ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ಜೆರಾಕ್ಸ್ ಅಂಗಡಿ ನಡೆಸು ತ್ತಿದ್ದಾರೆ. ತಾಯಿ ಕುಸುಮ ಬಿ.ಕಾಂ ಪದವೀಧರೆ. ಅಕ್ಕ ನಮ್ರತಾರಾವ್ ಕೂಡ ಬಿ.ಕಾಂ ಓದುತ್ತಿದ್ದಾಳೆ.
-ಎಲ್.ಐಶ್ವರ್ಯರಾವ್, ಮರಿಮಲ್ಲಪ್ಪ ಕಾಲೇಜು


ಉನ್ನತ ಅಧಿಕಾರಿ ಆಗಬೇಕು
ವಾಣಿಜ್ಯ ವಿಭಾಗದಲ್ಲಿ 585 ಅಂಕ ಬಂದಿದ್ದು ಜಿಲ್ಲೆಗೆ ಮೊದಲಿಗಳಾಗಿದ್ದೇನೆ. ತಂದೆ ಗಿಲ್ಬರ್ಟ್ ಇನ್‌ಫೋಸಿಸ್‌ನಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಸೆಲೀನ್ ಡಿ~ಸೋಜಾ ಬೆಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಗುಮಾಸ್ತ ರಾಗಿದ್ದಾರೆ. ಅಕ್ಕ ಕೆ.ಆರ್.ಪೇಟೆ ಸರ್ಕಾರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಳೆ. ತಮ್ಮ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು ಶೇ 92 ಅಂಕ ಪಡೆದಿದ್ದಾನೆ. ನಾನು ಉನ್ನತ ಅಧಿಕಾರಿ ಆಗಬೇಕು ಎಂಬುದು ನಮ್ಮ ತಂದೆಯ ಕನಸು.
-ಪ್ರಿನ್ಸಿ ಡಿ~ಸೋಜಾ, ಎಸ್‌ವಿಇಐ ಕಾಲೇಜು

ಟೇಲರ್ ಮರಿಮೊಮ್ಮಗಳು!
ನಮ್ಮ ತಂದೆಯ ತಂದೆ ಅರಮನೆ ಯಲ್ಲಿ ಟೇಲರ್ ಆಗಿದ್ದರು. ತಂದೆ ಯವರು ಲ್ಯಾನ್ಸ್‌ಡೌನ್ ಕಟ್ಟಡ ದಲ್ಲಿ ಟೇಲರಿಂಗ್ ಮಳಿಗೆ ಆರಂಭಿಸಿ ದರು. 1988ರಲ್ಲಿ ನಾನು ಜೆರಾಕ್ಸ್ ಮಳಿಗೆ ತೆರೆದೆ. ಅಂದಿನಿಂದ ಈವರೆಗೂ ಇದೇ ನನ್ನ ವೃತ್ತಿ. ಮಗಳು ಐಶ್ವರ್ಯ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ 576 ಅಂಕ  ಪಡೆದಿದ್ದಾಳೆ. ಅವಳು ಮಹಾರಾಜರ ಟೇಲರ್‌ನ ಮರಿಮೊಮ್ಮಗಳು ಎನ್ನುವ ಖುಷಿ ನನ್ನದು. ಕಳೆದ 40 ವರ್ಷಗಳಿಂದ ನಾವು ಉದ್ಯೋಗ ಮಾಡು ತ್ತಿರುವುದಕ್ಕೋ ಏನೋ ಮನೆಯಲ್ಲಿ ಎಲ್ಲರೂ ವಾಣಿಜ್ಯ ವಿಭಾಗದಲ್ಲೇ ಅಧ್ಯಯನ ಮಾಡುತ್ತಿದ್ದಾರೆ.
-ಲಕ್ಷ್ಮಣ್‌ರಾವ್, (ಐಶ್ವರ್ಯ ಅವರ ತಂದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.