ADVERTISEMENT

ಲಿಂಕ್ ರಸ್ತೆ ಕಾಮಗಾರಿ ಕಳಪೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:20 IST
Last Updated 15 ಅಕ್ಟೋಬರ್ 2012, 7:20 IST

ತಿ.ನರಸೀಪುರ: ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ನಡೆಯುತ್ತಿರುವ ಲಿಂಕ್ ರಸ್ತೆ ಹಾಗೂ ನಂಜನಗೂಡು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಅನುಮೋದಿತ ಅಂದಾಜು ಪ್ರಸ್ತಾವನೆಯಂತೆ ಮಾಡದೇ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಈ ಕಾಮಗಾರಿ ಸ್ಥಗಿತಗೊಳಿಸುವಂತೆ ನಾಗರಿಕ ಸೇವಾ ವೇದಿಕೆ ಹಾಗೂ ಸಾರ್ವಜನಿಕ ಪ್ರಮುಖರು ಭಾನುವಾರ ಒತ್ತಾಯಿಸಿದರು.

ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೇ ಇದ್ದ ಪಟ್ಟಣದ ಲಿಂಕ್ ರಸ್ತೆ ಹಾಗೂ ನಂಜನಗೂಡು (ತಾಲ್ಲೂಕು ಕಚೇರಿ) ರಸ್ತೆಯನ್ನು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಲಾಗುತ್ತಿದೆ.
 
ಆಯಿಲ್ ಮಿಲ್ ರಸ್ತೆ ಹಳೇ ಎಸ್‌ಬಿಎಂನಿಂದ ಎನ್‌ಎಚ್ 212ರ ವರೆಗೆ ರೂ. 50 ಲಕ್ಷ, ಪುರಸಭೆ ರಸ್ತೆ ರೂ. 50 ಲಕ್ಷ, ನಂಜನಗೂಡು ರಸ್ತೆಯ  ಸುಶೀಲಮ್ಮ ಕಾಲೊನಿ, ವಿನಾಯಕ ಕಾಲೊನಿ ಗೋಪಾಲಪುರ ಮಾರ್ಗವಾಗಿ ರೂ. 100 ಲಕ್ಷ, ಮಾಧವ್‌ರಾವ್ ರಸ್ತೆ ಅಭಿವೃದ್ಧಿಗೆ ರೂ. 50 ಲಕ್ಷ ಹಾಗೂ ಖಾಸಗಿ ಬಸ್ ನಿಲ್ದಾಣದಿಂದ ಭಗವಾನ್ ಟಾಕೀಸ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ 212ರ ವರೆಗೆ ಎರಡೂ ಬದಿಯಲ್ಲಿ ಫುಟ್‌ಪಾತ್ ನಿರ್ಮಾಣ ಹಾಗೂ ಪ್ರಾಥಮಿಕ ಶಾಲೆಯಿಂದ ಎನ್‌ಎಚ್ 212ರ ವರೆಗೆ ರಸ್ತೆ ಅಭಿವೃದ್ಧಿಯನ್ನು ರೂ. 150 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ಆದರೆ, ಪಟ್ಟಣದ ಲಿಂಕ್ ರಸ್ತೆಯಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಕಲ್ಪಿಸದೇ ರಸ್ತೆಯ ಅಭಿವೃದ್ಧಿ ಮಾಡಲು ಪಂಚಾಯಿತಿ ಕಿರಿಯ ಎಂಜಿನಿಯರ್ ಪುರುಷೋತ್ತಮ್ ಕಾಮಗಾರಿ ಮಾಡುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾದ ಮೇಲೆ ಮಳೆ ಬಂದರೆ ಚರಂಡಿ ನೀರು ರಸ್ತೆಯ ಅಂಗಡಿಗಳ ಒಳಗೆ ನುಗ್ಗುವ ಸಾಧ್ಯತೆ ಇದೆ.

ಸೂಕ್ತ ಕ್ರಿಯಾ ಯೋಜನೆ ಮಾಡಿ ಈ ಕಾಮಗಾರಿ ನಡೆಸುತ್ತಿಲ್ಲ. ಜತೆಗೆ  ಈ ರಸ್ತೆ ಅಭಿವೃದ್ಧಿಗೆ ಅನುದಾನವಿದ್ದರೂ ರಸ್ತೆಯನ್ನು ಅಗೆದಾಗ ಬಿದ್ದಿರುವ ಜಲ್ಲಿಕಲ್ಲುಗಳ ಮೇಲೆಯೇ ಮಣ್ಣು ಹಾಕಿಸಿ ರಸ್ತೆ ಮಾಡುವ ಕೆಲಸಕ್ಕೆ ಎಂಜಿನಿಯರ್ ಮುಂದಾಗಿದ್ದಾರೆ.

ಇದರಿಂದ ರಸ್ತೆ ಗುಣಮಟ್ಟದಿಂದ ಆಗಲು ಸಾಧ್ಯವಿಲ್ಲ. ಹೆಚ್ಚು ಕಾಲ ಬಾಳಿಕೆ ಇರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿರುವುದಲ್ಲದೇ, ಕಳಪೆ ಗುಣಮಟ್ಟದ ಕಾಮಗಾರಿಗೆ ಕಿರಿಯ ಎಂಜಿನಿಯರ್ ಪುರುಷೋತ್ತಮ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮುಖಂಡರು ದೂರಿದರು.

ಲಿಂಕ್ ರಸ್ತೆ ಹಾಗೂ ನಂಜನಗೂಡು ರಸ್ತೆಗಳ ಅಭಿವೃದ್ಧಿ ಅನುಮೋದಿತ ಪ್ರಸ್ತಾವನೆಯಂತೆ ನಡೆಯುತ್ತಿಲ್ಲ. ಅಧಿಕಾರಿಗಳು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ಈ ಬಗ್ಗೆ ತಕ್ಷಣವೇ ಶಾಸಕರು ಹಾಗೂ ಮೇಲ್ಮಟ್ಟದ ಅಧಿಕಾರಿಗಳು ಸಾರ್ವಜನಿಕರ  ಹಾಗೂ ಮುಖಂಡರ ಸಭೆ ಕರೆದು ವಿವರ ನೀಡಲಿ ಎಂದು ಆಗ್ರಹಿಸಿದರು.

ಕೆ.ಎನ್.ಪ್ರಭುಸ್ವಾಮಿ, ವೇದಿಕೆಯ ಗೌರವಾಧ್ಯಕ್ಷ ಪಿ.ಪುಟ್ಟರಾಜು, ಹೋಟೆಲ್ ರಾಜಣ್ಣ, ಕೆ.ಎಸ್. ಶ್ರೀಹರಿ, ನಾರಾಯಣಸ್ವಾಮಿ, ವೆಂಕಟೇಶ್, ಬೈರಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಜೆ. ವೆಂಕಟೇಶ್, ನವಿಲೂರು ಸುಬ್ಬಣ್ಣ, ಮೋಹನ್, ಅಂಗಡಿ ಶೇಖರ್, ವಿಷಕಂಠಮೂರ್ತಿ, ಕೆ. ನಂಜುಂಡಸ್ವಾಮಿ, ಶ್ರೀನಿವಾಸ್, ನಟರಾಜು, ಸಿದ್ದಪ್ಪ, ರಂಗನಾಥ್, ಸಾಲುಂಡಿ ಮಹಾದೇವ್, ಟೇಲರ್ ಸೋಮಣ್ಣ,  ಎಸ್‌ಎಸ್‌ಕೆ ನವೀನ್, ಕಟ್ಟೆಹುಂಡಿ ರಘು, ರಿಯಾಜ್, ಕಾಯಿ ನಂಜುಂಡ, ಸಹನಾ ಮಂಜು, ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.