ADVERTISEMENT

ಲೋಕಾಯುಕ್ತ ದಾಳಿ: ಎಫ್‌ಡಿಎ ಬಂಧನ, 40 ಸಾವಿರ ವಶ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 11:08 IST
Last Updated 3 ಆಗಸ್ಟ್ 2013, 11:08 IST

ಮೈಸೂರು: ಅಬಕಾರಿ ಕಚೇರಿಗಳ ಮೇಲೆ ರಾಜ್ಯದಾದ್ಯಂತ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ನಗರದ ಅಬಕಾರಿ ಕಚೇರಿ ಮೇಲೆ ಶುಕ್ರವಾರ ದಾಳಿ ಮಾಡಲಾಗಿ ಪ್ರಥಮದರ್ಜೆ ಸಹಾಯಕ ರವಿ ಅವರು, ಯಾವುದೇ ದಾಖಲಾತಿ ಇಲ್ಲದೆ ಇಟ್ಟುಕೊಂಡಿದ್ದ ರೂ 40 ಸಾವಿರ ನಗದು ವಶಪಡಿಸಿಕೊಂಡು, ಬಂಧಿಸಿದ್ದಾರೆ.

ಮದ್ಯದ ಅಂಗಡಿಗಳ ಪರವಾನಗಿ ನವೀಕರಣ ಈಚೆಗೆ ನಡೆದಿತ್ತು. ಅಲ್ಲದೇ, ಬಾರ್ ಮತ್ತು ಪಬ್‌ಗಳು ನೀಲನಕ್ಷೆ ಅನ್ವಯ ಕ್ರಮಬದ್ಧವಾಗಿ ಇದೆಯೇ, ಒಂದು ವೇಳೆ ಇದನ್ನು ಉಲ್ಲಂಘಿಸಿ ಪರವಾನಗಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡುವ ಸಲುವಾಗಿ ದಾಳಿ ನಡೆಸಲಾಗಿತ್ತು.

ಈ ವೇಳೆ ಎಫ್‌ಡಿಎ ರವಿ ಅವರಿಗೆ ಸೇರಿದ ಬೀರುವಿನಲ್ಲಿ ರೂ 40 ಸಾವಿರ ನಗದು ಪತ್ತೆಯಾಯಿತು. ಹಣ ಎಲ್ಲಿಂದ ಬಂತು ಎಂದು ಲೋಕಾಯುಕ್ತ ಪೊಲೀಸರು ವಿಚಾರಿಸಲಾಗಿ, `ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗಾಗಿ ಸಹೋದರ ಗುರುವಾರ ಹಣ ಕೊಟ್ಟು ಹೋಗಿದ್ದರು' ಎಂದು ತಿಳಿಸಿದರು. ಲೋಕಾಯುಕ್ತ ಪೊಲೀಸರು ಸಹೋದರನನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ `ರವಿ ಅವರನ್ನು ಮೂರ‌್ನಾಲ್ಕು ದಿನಗಳಿಂದ ನೋಡಿಯೇ ಇಲ್ಲ' ಎಂದು ಉತ್ತರಿಸಿದರು. ಕೂಡಲೇ ರವಿ ಅವರನ್ನು ಬಂಧಿಸಿದ್ದಾರೆ.

`ಮದ್ಯದಂಗಡಿಗಳ ಪರವಾನಗಿಯನ್ನು ಪಾರದರ್ಶಕವಾಗಿ ನೀಡಲಾಗಿದೆಯೇ, ನೀಲನಕ್ಷೆ ಅನ್ವಯ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ನಿರ್ಮಾಣ ಮಾಡಲಾಗಿದೆಯೆ, ಒಂದು ವೇಳೆ ನೀಲನಕ್ಷೆ ಉಲ್ಲಂಘಿಸಿದ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಪರವಾನಗಿ ನವೀಕರಣ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಂಬಂಧಪಟ್ಟ ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವೇಳೆ ಉಲ್ಲಂಘನೆ ಆಗಿದ್ದು ಕಂಡುಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಲೋಕಾಯುಕ್ತ ಎಸ್ಪಿ ಜಗದೀಶ್ ಪ್ರಸಾದ್ ತಿಳಿಸಿದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಮ್ಯಾಥ್ಯು ಥಾಮಸ್ ಮತ್ತು ತಂಡ ದಾಳಿಯ ನೇತೃತ್ವ ವಹಿಸಿದ್ದರು.

ಚಾಮರಾಜನಗರ ವರದಿ: ಜಿಲ್ಲೆಯ ಅಬಕಾರಿ ಕಚೇರಿ ಮೇಲೂ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದರು. ಆದರೆ, ಯಾವುದನ್ನೂ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬರಲಿಲ್ಲ. ಹಾಗಾಗಿ, ಅಧಿಕಾರಿಗಳು ಬರಿಗೈಲಿ ಹಿಂದಿರುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.