ADVERTISEMENT

ವರ್ಷಾಂತ್ಯಕ್ಕೆ ಶೋಧನಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 5:20 IST
Last Updated 23 ಡಿಸೆಂಬರ್ 2017, 5:20 IST

ಮೈಸೂರು: ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಮತ್ತೊಮ್ಮೆ ಹೆಸರು ಶಿಫಾರಸು ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಯು ಈ ಹಿಂದೆ ರಚಿಸಿರುವ ಶೋಧನಾ ಸಮಿತಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ವರ್ಷಾಂತ್ಯದಲ್ಲಿ ಸಭೆಗಳು ನಡೆಯಲಿವೆ.

ಮೈಸೂರು ವಿ.ವಿ ಶೋಧನಾ ಸಮಿತಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಚ್‌.ಪಿ.ಖಿಂಚಾ ಅಧ್ಯಕ್ಷತೆಯಲ್ಲಿ (ಸರ್ಕಾರದ ನಾಮನಿರ್ದೇಶನ), ಡಾ.ಎಂ.ಮುನಿಯಮ್ಮ (ರಾಜ್ಯಪಾಲರ ನಾಮನಿರ್ದೇಶನ), ಗುಲಬರ್ಗಾ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ವಿ.ಬಿ.ಕುಟಿನೊ, ಚವ್ಹಾಣ್‌ (ವಿಶ್ವವಿದ್ಯಾಲಯ ಅನುದಾನ ಆಯೋಗದ ನಾಮನಿರ್ದೇಶನ) ಇದ್ದಾರೆ. ಈ ಸಮಿತಿಯು ಡಿ. 29ರ ನಂತರ ಸಭೆ ಸೇರಿ ಹೊಸ ಹೆಸರುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುಂಚೆ ಬೆಂಗಳೂರು ವಿಶ್ವವಿದ್ಯಾಲಯದ ಶೋಧನಾ ಸಮಿತಿ ಸಭೆ ನಡೆಸಲಿದೆ. ಡಾ.ಎಸ್‌.ಆರ್‌.ನಿರಂಜನ (ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ) ಅವರ ಅಧ್ಯಕ್ಷತೆಯ ಶೋಧನಾ ಸಮಿತಿಯು ಡಿ.26ರಂದು ಸಭೆ ನಡೆಸಿ ಹೆಸರುಗಳನ್ನು ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದೆ. ಈ ಸಭೆಯ ಬಳಿಕವಷ್ಟೇ ಮೈಸೂರು ವಿ.ವಿ.ಯ ಶೋಧನಾ ಸಮಿತಿ ಸಭೆ ನಡೆಯಲಿದೆ.

ADVERTISEMENT

ಹಳೆಯ ಹೆಸರು ಇರಕೂಡದು: ಶೋಧನಾ ಸಮಿತಿಗಳು ನೀಡಿದ್ದ ಶಿಫಾರಸನ್ನು ರಾಜ್ಯ ಸರ್ಕಾರವು ಈಗಾಗಲೇ ಮೂರು ಬಾರಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಮೂರು ಬಾರಿಯೂ ರಾಜ್ಯಪಾಲರು ಶಿಫಾರಸನ್ನು ತಿರಸ್ಕರಿಸಿದ್ದರು. 2ನೇ ಬಾರಿ ಪಟ್ಟಿಯನ್ನು ಕಳುಹಿಸಿದ್ದಾಗಲೇ ರಾಜ್ಯಪಾಲರು ಹೊಸ ಪಟ್ಟಿಯನ್ನು ನೀಡುವಂತೆ ಸೂಚಿಸಿದ್ದರು. ಆದರೂ, ಸರ್ಕಾರವು ಮೂರನೇ ಬಾರಿಯೂ ಹಳೆಯ ಪಟ್ಟಿಯನ್ನೇ ಕಳುಹಿಸಿತ್ತು. ಈ ಬಾರಿ ರಾಜ್ಯಪಾಲರು ಶೋಧನಾ ಸಮಿತಿಯು ಹೊಸ ಪಟ್ಟಿಯನ್ನು ನೀಡುವಾಗ ಹಳಬರ ಹೆಸರನ್ನು ಸೇರಿಸಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮೈಸೂರು ವಿ.ವಿ ಕುಲಪತಿ ಆಯ್ಕೆ ಸಂದರ್ಭದಲ್ಲಿ ಈ ಹಿಂದೆ ಪ್ರೊ.ಜೆ.ಶಶಿಧರ‍ಪ್ರಸಾದ್ ಅವರ ಹೆಸರುಳ್ಳ ಮೂವರ ಪಟ್ಟಿಯನ್ನು ಅಂದಿನ ರಾಜ್ಯಪಾಲರಾಗಿದ್ದ ಟಿ.ಎನ್‌.ಚತುರ್ವೇದಿ ಅವರು ತಿರಸ್ಕರಿಸಿದ್ದರು. ಹೊಸ ಪಟ್ಟಿಯನ್ನು ಕೊಡುವಂತೆ ರಾಜ್ಯಪಾಲರು ಸೂಚಿಸಿದ್ದರಾದರೂ, ಶೋಧನಾ ಸಮಿತಿ ನೀಡಿದ ಹೊಸ ಪಟ್ಟಿಯಲ್ಲಿ ಪ್ರಸಾದ್‌ ಅವರ ಹೆಸರು ಸೇರಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.