ADVERTISEMENT

ವಾರದೊಳಗೆ ಪರಿಹಾರ ನೀಡಲು ಸ್ದ್ದಿದು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 8:25 IST
Last Updated 17 ಫೆಬ್ರುವರಿ 2012, 8:25 IST

ಮೈಸೂರು: ನಂಜನಗೂಡು ತಾಲ್ಲೂಕು ಚಿಕ್ಕಯ್ಯನಛತ್ರದ ದಿ. ಸೌತ್ ಇಂಡಿಯ ಪೇಪರ್ ಮಿಲ್ ಕಂಪೆನಿ ಅಲ್ಲಿನ ಮಹಿಳಾ ಕಾರ್ಮಿಕರಿಗೆ ಒಂದು  ವಾರದೊಳಗೆ ಕೆಲಸ ನೀಡಬೇಕು ಅಥವಾ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಡುವು ನೀಡಿದ್ದಾರೆ.

ಕೆಲಸ ಅಥವಾ ಪರಿಹಾರ ಯಾವುದಾದರೂ ಒಂದನ್ನು ನೀಡಬೇಕು ಎಂದು ಒತ್ತಾಯಿಸಿ ಸುಮಾರು ನಾಲ್ಕು ತಿಂಗಳಿಂದ ಹಲವು ಮಹಿಳಾ ಕಾರ್ಮಿಕರು ಮಿಲ್ ಮುಂದೆ ಧರಣಿ ನಡೆಸುತ್ತಿದ್ದಾರೆ. ಗುರುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಮಹಿಳಾ ಕಾರ್ಮಿಕರ ಅಳಲು ಆಲಿಸಿದರು.

ಇದೇ ವೇಳೆ ಕಂಪೆನಿಯ ವ್ಯವಸ್ಥಾಪಕ ನಾಗರಾಜು ಅವರನ್ನು ಸ್ಥಳಕ್ಕೆ ಕರೆಸಿದ ಸಿದ್ದರಾಮಯ್ಯ, ಈವರೆಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದೀರಿ. ಇದರಿಂದ ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ನಾಲ್ಕು ತಿಂಗಳಿಂದ ಕಂಪೆನಿ ಮುಂದೆ ಕುಳಿತು ಧರಣಿ ನಡೆಸಿದರೂ ಯಾರೂ ಅವರ ನೋವಿಗೆ ಸ್ಪಂದಿಸಿಲ್ಲ. ಇನ್ನು ಒಂದು ವಾರದೊಳಗೆ ಎಲ್ಲ ಮಹಿಳೆಯರಿಗೂ ಕೆಲಸ ನೀಡಬೇಕು. ಇಲ್ಲವೇ ಅವರು ಕೇಳುವ ಪರಿಹಾರದ ಮೊತ್ತ ನೀಡಬೇಕು ಎಂದು ತಾಕೀತು ಮಾಡಿದರು.

ಒಂದು ವೇಳೆ ತಾವು ನೀಡಿದ ಗಡುವಿನೊಳಗೆ ಇದಕ್ಕೆ ಪರಿಹಾರ ಕಲ್ಪಿಸದಿದ್ದರೆ ಮಹಿಳೆಯರ ಜತೆ ತಾವೂ ಇದೇ ಸ್ಥಳದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಕಂಪೆನಿ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕೆ.ಮರೀಗೌಡ, ಧುರೀಣರಾದ ಬಿ.ಬಿ.ಕುಮಾರ್, ಪಿ.ಗಿರೀಶ್, ಪ್ರಭುಸ್ವಾಮಿ, ಅಹಿಂದ ಮುಖಂಡ ಗಿರಿರಾಜ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.