ADVERTISEMENT

ಶಾಲೆ ಅವ್ಯವಸ್ಥೆ ವಿರುದ್ಧ ಆಕ್ರೋಶ

ಆದರ್ಶ ವಿದ್ಯಾಲಯ: ಪೋಷಕರು,ಎಸ್‌ಡಿಎಂಸಿ ಸದಸ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 9:01 IST
Last Updated 4 ಜೂನ್ 2018, 9:01 IST

ಎಚ್‌.ಡಿ.ಕೋಟೆ: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದಾಗಿ ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದು, ಅಧಿಕಾರಿ ಗಳು, ಜನಪ್ರತಿನಿಧಿಗಳು ಇದನ್ನು ಸರಿಪಡಿಸ ದಿದ್ದರೆ ಮಕ್ಕಳನ್ನು ಸಾಮೂಹಿಕವಾಗಿ ಬೇರೆ ಶಾಲೆಗೆ ಸೇರಿಸುವುದಾಗಿ ಪೋಷಕರು ಎಚ್ಚರಿಕೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಕೆಲವು ಪೋಷಕರು ತುರ್ತುಸಭೆ ನಡೆಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣಕುಮಾರ್ ಮಾತನಾಡಿ, ಶಿಕ್ಷಕರ ಬೇಜವಾಬ್ದಾರಿಯಿಂದ ಶಾಲೆಯ ವ್ಯವಸ್ಥೆಯೇ ಹದಗೆಟ್ಟಿದೆ, ಮುಖ್ಯಶಿಕ್ಷಕರು ಸಮರ್ಥವಾಗಿರದೇ ಇರುವುದರಿಂದ ಈ ಸಮಸ್ಯೆಗಳು ಎದುರಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಸಿ ಊಟದ ಯೋಜನೆ ನಿರ್ವಹಿಸಲು ಶಿಕ್ಷಕರು ಪೈಪೋಟಿ ನಡೆಸುತ್ತಾರೆ. ಶಾಲೆಯ ಅವ್ಯವಸ್ಥೆಗಳ ಬಗ್ಗೆ ಪೋಷಕರು ಪ್ರಶ್ನಿಸಿದರೆ ಅವರ ಮಕ್ಕಳಿಗೆ ಕಿರುಕುಳ ಕೊಡುತ್ತಾರೆ ಎಂದು ಆರೋಪಿಸಿದರು.

ADVERTISEMENT

ಪ್ರಾರಂಭವಾದ ನಾಲ್ಕೈದು ವರ್ಷಗಳಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದಿದ್ದರೂ ಶಿಕ್ಷಕರ ಶ್ರಮದಿಂದ ಶಾಲೆ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿತ್ತು. ಈಗ ಎಲ್ಲ ಸೌಕರ್ಯದೊಂದಿಗೆ ₹4 ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣಗೊಂಡಿದ್ದರೂ ಶಿಕ್ಷಣದ ಗುಣಮಟ್ಟ ಕುಸಿಯುತ್ತಲೇ ಇದೆ. ಇದರಿಂದ ಕಳೆದ ವರ್ಷ 15, ಈ ವರ್ಷ 10 ವಿದ್ಯಾರ್ಥಿಗಳು ಈ ಶಾಲೆ ತೊರೆದು ಖಾಸಗಿ ಶಾಲೆಗೆ ಸೇರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರಾದ ಲಾರಿ ಪ್ರಕಾಶ್, ಸುಹಾಸಿನಿ ದಿನೇಶ್, ನಳಿನಿ ಪೋಷಕರಾದ ಮಂಜುಳಾಬಾಯಿ, ಮನೋಜ್, ನಾಗೇಂದ್ರ, ಜೀವಿಕ ಉಮೇಶ್, ಸಿದ್ದರಾಜು, ಶಶಿಕಲಾ, ರಾಜೇಶ್, ಸುಮಾ, ಸುರೇಶ್, ವಿಜೇಶ್, ಸಿದ್ಧಾರ್ಥ ಇತರರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.