ADVERTISEMENT

ಶಾಸಕರಿಂದ ವಿವಿಧ ಸವಲತ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 9:35 IST
Last Updated 23 ಮಾರ್ಚ್ 2011, 9:35 IST
ಶಾಸಕರಿಂದ ವಿವಿಧ ಸವಲತ್ತು ವಿತರಣೆ
ಶಾಸಕರಿಂದ ವಿವಿಧ ಸವಲತ್ತು ವಿತರಣೆ   

ಹುಣಸೂರು: ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹುಣಸೂರು ಪುರಸಭೆ ವತಿಯಿಂದ ಶೇ.22 ಅನುದಾನದಲ್ಲಿ ಸವಲತ್ತು ನೀಡುತ್ತಿದ್ದು, ಫಲಾನುಭವಿಗಳು ಯೋಜನೆಯ ಪ್ರಯೋಜನವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು.

ಪಟ್ಟಣ ಪುರಸಭೆ ಕಚೇರಿ ಅವರಣದಲ್ಲಿ ಶೇ.22ರ ಅನು–ದಾನದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಹಾಗು ಇತರೆ ವರ್ಗದವರಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಎಸ್‌ಸಿ ಮತ್ತು ಎಸ್‌ಟಿ ಜನಾಂಗದಲ್ಲಿ ಹಿಂದುಳಿದ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಲು ವಿವಿಧ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಿ ಎಂದರು.

ಇದೇ ಸಮಯದಲ್ಲಿ 45ಮಂದಿ ಎಸ್‌ಸಿ ಮತ್ತು ಎಸ್‌ಟಿ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು 5ಸಾವಿರ ರೂಪಾಯಿ ನೀಡಲಾಯಿತು. ಸಾಮಾನ್ಯ ವರ್ಗದ 90 ಮಹಿಳೆಯರಿಗೆ ರೂ. 4 ಲಕ್ಷ ಅನುದಾನದಲ್ಲಿ ತಲಾ 5 ಸಾವಿರ ರೂಪಾಯಿ ವೈಯಕ್ತಿಕ ಸಾಲವನ್ನು ನೀಡಲಾಗಿದೆ ಎಂದರು. ವಿದ್ಯುತ್ ಶಾಕ್ : ತಾಲ್ಲೂಕಿನ ಗ್ರಾಮೀಣ ಪ್ರದೇಶ ದಲ್ಲಿ ವಿದ್ಯುತ್ ಕೊರತೆಯಿಂದ ಕುಡಿಯುವ ನೀರಿನ ತೊಂದರೆಯಾಗಿದೆ. ವಿದ್ಯುತ್ ವ್ಯತ್ಯಯ ಗ್ರಾಮೀಣ ಪ್ರದೇಶದ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಂಜುಳ ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.