ADVERTISEMENT

ಸಂಯುಕ್ತ ಆರೋಗ್ಯ ನಿರ್ವಹಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 7:40 IST
Last Updated 11 ಜುಲೈ 2012, 7:40 IST

ಮೈಸೂರು: ವಿಶ್ವದಲ್ಲಿಯೇ ಶ್ರೇಷ್ಠವಾದ ಆರೋಗ್ಯ ಪದ್ಧತಿ ನಮ್ಮ ದೇಶದಲ್ಲಿದೆ. ಆದರೆ ಪಾಶ್ಚಾತ್ಯ ಜೀವನಶೈಲಿಯ ಅನುಕರಣೆಯಿಂದ ನಾವು ಅನಾರೋಗ್ಯಕ್ಕೆ ತುತ್ತಾಗಿದ್ದೇವೆ. ಈ ಸವಾಲನ್ನು ಎದುರಿಸಲು ಪಾರಂಪರಿಕ ಮತ್ತು ಆಧುನಿಕ ಚಿಕಿತ್ಸಾ ಪದ್ಧತಿಗಳ ಸಂಯುಕ್ತ ಆರೋಗ್ಯ ನಿರ್ವಹಣಾ ಪದ್ಧತಿ ನಮ್ಮಲ್ಲಿ ಬರಬೇಕು ಎಂದು ಆಯುಷ್ ಇಲಾಖೆ ನಿರ್ದೇಶಕ ಜಿ.ಎನ್. ಶ್ರೀಕಂಠಯ್ಯ ಹೇಳಿದರು.

ಅವರು ಎಸ್‌ಡಿಎಂ ಮ್ಯಾನೇಜ್‌ಮೆಂಟ್ ಸಂಸ್ಥೆ ಮತ್ತು ಆಯುಷ್ ಇಲಾಖೆ ಆಶ್ರಯದಲ್ಲಿ ಮಂಗಳ ವಾರ ಆಯೋಜಿಸಲಾಗಿದ್ದ `ಪಾರಂಪರಿಕ ವೈದ್ಯ ಪದ್ಧತಿಗಳಲ್ಲಿರುವ ಅವಕಾಶ ಮತ್ತು ಸವಾಲುಗಳು~ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿದ  ಮಾತನಾಡಿದರು. `ಇವತ್ತು ಭಾರತ ಮಧುಮೇಹ ರಾಜಧಾನಿಯಾಗಿದೆ.

ಅಲ್ಲದೇ ಹೃದ್ರೋಗ ಮತ್ತಿತರ ಸಮಸ್ಯೆಗಳೂ ಹೆಚ್ಚಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಗಳು ಇದನ್ನು ದೃಢಪಡಿಸಿರುವುದು ಆತಂಕಕಾರಿ. ಮುಂದುವರಿದ ದೇಶಗಳು ಮತ್ತು ನಮ್ಮ ಪಕ್ಕದ ಚೀನಾದಲ್ಲಿ ಆಧುನಿಕ ಮತ್ತು ಪಾರಂಪರಿಕ ವೈದ್ಯ ಪದ್ಧತಿಗಳ ಸಮ್ಮೀಶ್ರಣ ಪದ್ಧತಿಯಿಂದ ಆರೋಗ್ಯ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ನಮ್ಮಲ್ಲಿ ಅದು ಆಗಬೇಕು~ ಎಂದು ಸಲಹೆ ನೀಡಿದರು.

`ನಮ್ಮ ಪರಂಪರೆಯ ಅತ್ಯಂತ ಮಹತ್ವದ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಯೋಗ, ಸಿದ್ಧ, ಯುನಾನಿಗಳಲ್ಲಿ ಆರೋಗ್ಯವಂತನ ಆರೋಗ್ಯವನ್ನು ಸಂರಕ್ಷಿಸುವುದು ಮತ್ತು ಸರಳ ಹಾಗೂ ಆರ್ಥಿಕವಾಗಿ ಹೊರೆಯಲ್ಲದ ಚಿಕಿತ್ಸೆ ನೀಡುವುದಾಗಿದೆ. ಪ್ರಾಥಮಿಕ ಹಂತದ ಚಿಕಿತ್ಸೆಗಳಿಗೆ ಆಯುಷ್ ಪದ್ಧತಿಗಳು ಸಾಕು.

ಆದರೆ ನಮ್ಮ ದೇಶದಲ್ಲಿ ಆರೋಗ್ಯ ನಿರ್ವಹಣೆ ಯೆಂದರೆ ರೋಗ ಚಿಕಿತ್ಸೆಗೆ ಮಾತ್ರ ಸೀಮಿತವಾಗಿ ರುವುದು ಸರಿಯಲ್ಲ. ಆರೋಗ್ಯ ನಿರ್ವಹಣೆಯೆಂದರೆ ಆರೋಗ್ಯವಂತ ವ್ಯಕ್ತಿಯ ಸದೃಢತೆಯನ್ನು ಮತ್ತಷ್ಟು ವೃದ್ಧಿಸುವುದಾಗಿದೆ~ ಎಂದು ಹೇಳಿದರು.

`ಸಾಂಕ್ರಾಮಿಕವಲ್ಲದ ಮತ್ತು ಜೀವನಶೈಲಿಯ ರೋಗಗಳಿಂದಾಗಿ ಭಾರತದಲ್ಲಿ ಇವತ್ತು ಚಿಕಿತ್ಸೆಗಳು ದುಬಾರಿಯಾಗುತ್ತಿವೆ. ಈ ರೋಗಗಳು ಗ್ರಾಮೀಣ ಜನರನ್ನೂ ಬಾಧಿಸುತ್ತಿವೆ. ಆದ್ದರಿಂದ ಗ್ರಾಮೀಣ ಮತ್ತು ಬಡಜನರ ಮನೆ ಬಾಗಿಲಿಗೇ ತಲುಪುವ ಸರಳವಾದ ಹಾಗೂ ಸುರಕ್ಷಿತವಾದ ಕಡಿಮೆ ಖರ್ಚಿನ ಚಿಕಿತ್ಸೆಗಳು ನಮ್ಮ ಪಾರಂಪರಿಕ ವೈದ್ಯ ಪದ್ಧತಿಯಲ್ಲಿವೆ.
 
ಅವುಗಳ ಕುರಿತು ಆಯುಷ್  ಕೆಲಸ ಮಾಡುತ್ತಿದೆ. ಪ್ರತಿನಿತ್ಯ ಯೋಗ ಅಭ್ಯಾಸದಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನಮ್ಮ ಪಾರಂಪರಿಕವಾದ ಆಹಾರ ಪದ್ಧತಿಯಲ್ಲಿಯೇ ನಮಗೆ ಉತ್ತಮ ಪೌಷ್ಟಿಕಾಂಶಗಳು ಮತ್ತು ಔಷಧಿ ಗುಣಗಳು ಸಿಗುತ್ತವೆ~ ಎಂದು ತಿಳಿಸಿದರು.

`ಮಕ್ಕಳು ಜನಿಸುವ ಮುನ್ನವೇ ಅವರ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಉತ್ತಮಗೊಳಿ ಸುವ ಔಷಧಿಗಳು ನಮ್ಮ ಪಾರಂಪರಿಕ ಪದ್ಧತಿಗ ಳಲ್ಲಿವೆ.  ಜಗತ್ತಿನ ಯಾವುದೇ ವೈದ್ಯಕೀಯ ಪದ್ಧತಿ ಯಲ್ಲಿಯೂ ಔಷಧಿಗಳು ಇಲ್ಲ. ಹುಟ್ಟುವ ಮಕ್ಕಳು ಆರೋಗ್ಯವಂತರಾಗಿ ಹುಟ್ಟಿದರೆ, ದೇಶಕ್ಕೆ ಅವರು ಮುಂದೆ ಕೊಡುವ ಕೊಡುಗೆಯೂ ಆರೋಗ್ಯ ಪೂರ್ಣವಾಗಿರುತ್ತವೆ~ ಎಂದು ಅಭಿಪ್ರಾಯಪಟ್ಟರು.

ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಎನ್.ಆರ್. ಪರಶುರಾಮ್. ಡಾ. ಪೈ, ಡಾ. ಅನಿಲಕುಮಾರ್,  ಜಿಎಟಿಎಚ್‌ಎಸ್ ಮತ್ತು ಎಂಬಿಎಸ್‌ಎಸ್‌ಐ ಮುಖ್ಯ ಕಾರ್ಯನಿರ್ವಹ ಣಾಕಾರಿ ಡಾ.ಗುಂಡು ಎಚ್.ಆರ್.ರಾವ್, ಎಂಬಿಎಸ್‌ಎಸ್‌ಐ ಅಧ್ಯಕ್ಷ ಡಾ.ಬಿ.ಆರ್.ಪೈ. ಆಯುಷ್ ಇಲಾಖೆ ಜಿಲ್ಲಾ ಅಕಾರಿ ಡಾ.ಎನ್. ನಾಗೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.