ADVERTISEMENT

ಸಡಗರದ ಸಿಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:10 IST
Last Updated 7 ಏಪ್ರಿಲ್ 2012, 10:10 IST

ಹುಣಸೂರು: ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಶುಕ್ರವಾರ ಸಡಗರದಿಂದ ಸಿಡಿ ಉತ್ಸವ ನಡೆಯಿತು.

ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ನಡೆದ ಸಿಡಿ ಉತ್ಸವಕ್ಕೆ ಸುತ್ತಲಿನ 12 ಗ್ರಾಮದಿಂದ ಭಕ್ತರು ಸೇರಿದ್ದರು. ಸಿಡಿಯಮ್ಮ ದೇವರು ಸಿಡಿಗೇರುತ್ತಿದ್ದಂತೆ ಹರಕೆ ಅರ್ಪಿಸಲು ಭಕ್ತರು ಮುಂದಾದರು. ಹಲವರು ಬಾಳೆಹಣ್ಣು, ಜವನ, ತೆಂಗಿನಕಾಯಿ ಹಾಗೂ ಕೋಳಿಗಳನ್ನು ಸಿಡಿ ತೇರಿನತ್ತ ಎಸೆದು ಹರಕೆ ತೀರಿಸಿದರು.

ಸಿಡಿ ಉತ್ಸವ ನಡೆಯುವ ಸ್ಥಳ ಹಲವಾರು ವರ್ಷಗಳಿಂದ ಸಮತಟ್ಟು ಮಾಡದೆ ಸಿಡಿ ಜಾತ್ರೆಗೆ ತೊಂದರೆ ಆಗಿತ್ತು. ಈ ಬಾರಿ ಗ್ರಾಮ ಪಂಚಾಯಿತಿ ತೋರಿಸಿದ ವಿಶೇಷ ಕಾಳಜಿಯಿಂದಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೆಲ ಸಮತಟ್ಟು ಮಾಡಿಸಲಾಗಿತ್ತು. ಜಾತ್ರೆಗೆ ಬಂದ ಅಪಾರ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿತ್ತು.

ಉತ್ಸವದಲ್ಲಿ ಬೆಳ್ತೂರು, ಕಲ್ಕುಣಿಕೆ, ಕಟ್ಟೆಮಳಲವಾಡಿ ಕೊಪ್ಪಲು, ಕಟ್ಟೆಮಳಲವಾಡಿ ಮತ್ತು ಮರೂರು ಗ್ರಾಮಗಳಿಂದ ಸಿಡಿಯಮ್ಮ, ಚಿಕ್ಕಮ್ಮ, ಬೀರೇಶ್ವರ ಮತ್ತು ಆಂಜನೇಯ ದೇವರ ಮೂರ್ತಿಗಳನ್ನು ಲಕ್ಷ್ಮಣತೀರ್ಥ ನದಿಯಲ್ಲಿ ಶುಚಿಗೊಳಿಸಿ ಮೆರವಣಿಗೆ ಮೂಲಕ ಸಿಡಿಯಮ್ಮನ ದೇವಸ್ಥಾನಕ್ಕೆ ತರಲಾಯಿತು. ನಂತರ ಅನ್ನ ಬಲಿ ನೀಡಿದ ಬಳಿಕ ಸಿಡಿ ರಥ ಏರಿಸಲಾಯಿತು.

ಶಾಸಕ ಎಚ್.ಪಿ. ಮಂಜುನಾಥ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.