ADVERTISEMENT

ಸ್ವಚ್ಛನಗರಿ: ಮೈಸೂರಿಗೆ ಅಗ್ರಪಟ್ಟ

3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:01 IST
Last Updated 17 ಮೇ 2018, 6:01 IST

ಮೈಸೂರು: ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪ್ರಕಟಿಸಿದ ಸ್ವಚ್ಛನಗರಗಳ ರ‍್ಯಾಂಕಿಂಗ್‌ನ 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಅಗ್ರಸ್ಥಾನ ಲಭಿಸಿದೆ.

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಜನಸಂಖ್ಯೆಗೆ ಅನುಗುಣವಾಗಿ ಸ್ವಚ್ಛನಗರ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಿದೆ. ‘ದೇಶದ ಸ್ವಚ್ಛನಗರಿ ಮೈಸೂರಿಗೆ ಅಭಿನಂದನೆಗಳು’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಬುಧವಾರ ‘ಟ್ವೀಟ್‌’ ಮಾಡಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿರುವ ಮೈಸೂರಿಗೆ 2015 ಮತ್ತು 2016ರಲ್ಲಿ ಅಗ್ರಸ್ಥಾನ ಲಭಿಸಿತ್ತು. ಆದರೆ, 2017ರಲ್ಲಿ ಐದನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಮತ್ತೆ ಅಗ್ರಸ್ಥಾನಕ್ಕೇರಿದೆ.

ADVERTISEMENT

ಈ ಬಾರಿ 4,041 ನಗರಗಳು ಮತ್ತು ಪಟ್ಟಣಗಳು ‘ಸ್ವಚ್ಛ ಸರ್ವೇಕ್ಷಣ್‌’ನಲ್ಲಿ ಪಾಲ್ಗೊಂಡಿದ್ದವು. ಹೆಚ್ಚಿನ ಸಂಖ್ಯೆಯ ನಗರಗಳು ಸ್ಪರ್ಧೆಯಲ್ಲಿದ್ದ ಕಾರಣ ಜನಸಂಖ್ಯೆಗೆ ಅನುಗುಣವಾಗಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಲಾಗಿದೆ.

2017ರ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ನಗರದಲ್ಲಿ ಸ್ವಚ್ಛತೆಗೆ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿ ರ‍್ಯಾಂಕಿಂಗ್‌ ನಿರ್ಧರಿಸಲಾಗಿದೆ. ಸಮೀಕ್ಷಾ ತಂಡವು ನಗರದಲ್ಲಿ ಫೆಬ್ರುವರಿ 12‌ರಿಂದ ಒಂದು ವಾರ ಸ್ವಚ್ಛತಾ ಸಮೀಕ್ಷೆ ಕೈಗೊಂಡಿತ್ತು. ಸಮೀಕ್ಷಾ ತಂಡ ನೀಡಿದ ಅಂಕಗಳ ಆಧಾರದಲ್ಲಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಲಾಗಿದೆ.

‘ಕಳೆದ ಬಾರಿ ಕೈತಪ್ಪಿದ್ದ ಅಗ್ರಸ್ಥಾನ ವನ್ನು ಮರಳಿ ಪಡೆಯಲೇಬೇಕು ಎಂದು ಪಣತೊಟ್ಟು ಕೆಲಸ ಮಾಡಿದ್ದೆವು. ಅದಕ್ಕೆ ಫಲ ಲಭಿಸಿದೆ. ಈ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಶ್ರೇಯ ಸಲ್ಲಬೇಕು’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಪ್ರತಿಕ್ರಿಯಿಸಿದ್ದಾರೆ.

ಹಿಂದಿನ ಜಿಲ್ಲಾಧಿಕಾರಿ ಡಿ. ರಂದೀಪ್‌, ಪಾಲಿಕೆಯ ಹಿಂದಿನ ಆಯುಕ್ತ ಜಿ.ಜಗದೀಶ್‌ ಮತ್ತು ಮಾಜಿ ಮೇಯರ್‌ ಎಂ.ಜೆ.ರವಿಕುಮಾರ್‌ ಅವರು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್‌, ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮತ್ತು ಐಸಿಸಿ ಮ್ಯಾಚ್‌ ರೆಫರಿ ಜಾವಗಲ್‌ ಶ್ರೀನಾಥ್‌, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮಜ್ಞಾನಾನಂದ ಸ್ವಾಮೀಜಿ, ಅಂತರರಾಷ್ಟ್ರೀಯ ಯೋಗಪಟು ಎಚ್‌.ಖುಷಿ ಅವರನ್ನು ಸ್ವಚ್ಛತಾ ರಾಯ ಭಾರಿಯನ್ನಾಗಿ ಪಾಲಿಕೆ ನೇಮಕ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.