ADVERTISEMENT

ಹಕ್ಕು, ಸೌಲಭ್ಯ ಪಡೆಯಲು ಸಂಘಟಿತರಾಗಿ

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 9:44 IST
Last Updated 30 ಮೇ 2018, 9:44 IST

ತಿ.ನರಸೀಪುರ: ವಿವಿಧ ಸೌಲಭ್ಯಗಳನ್ನು ಹಾಗೂ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕ ವಲಯ ಸಂಘಟಿತವಾಗಬೇಕು ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ಸಲಹೆ ನೀಡಿದರು.

ತಾಲ್ಲೂಕಿನ ತಲಕಾಡು ಮುಖ್ಯರಸ್ತೆಯ ಚೌಹಳ್ಳಿ ಗ್ರಾಮದ ಸಮೀಪ ಇರುವ ಶಾಹಿ ಗಾರ್ಮೆಂಟ್ಸ್  ಮುಂಭಾಗದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ಮೇ 18ರ ನೆನಪು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರು ಹೆಚ್ಚು ಕೆಲಸಕ್ಕೆ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆಯೂ ಇಲ್ಲವಾಗಿದ್ದು, ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಮಹಿಳೆಯರಿಗೆ ಸುರಕ್ಷಿತ ಭಾವನೆ ಮೂಡಿಸುವ ಕೆಲಸ ಕಂಪನಿಗಳಿಂದಾಗಬೇಕಿದೆ ಎಂದ ಅವರು, ಎಲ್ಲ ಕಾರ್ಮಿಕರು ಸಿಐಟಿಯು ಸಂಘಟನೆಯ ಸದಸ್ಯರಾಗುವಂತೆ ಹಾಗೂ ಯಾವುದೇ ಸಮಸ್ಯೆಗಳಾದರೂ  ಸಂಘಟನೆಯ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ADVERTISEMENT

ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟ (ಡಿವೈಎಫ್ಐ) ಅಧ್ಯಕ್ಷ ಆಲಗೂಡು ಸಿ.ಪುಟ್ಟಮಲ್ಲಯ್ಯ ಮಾತನಾಡಿ, ಕಾರ್ಮಿಕರಿಗೆ 8 ಗಂಟೆ ಅವಧಿಯ ಕೆಲಸ, ಕನಿಷ್ಠ ಮಾಸಿಕ ವೇತನ ₹14,680 ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಮಹದೇಶ್, ಅಕ್ಷರ ದಾಸೋಹ ನೌಕರರ ಸಂಘದ ಕಾಮಾಕ್ಷಮ್ಮ, ಶಾಹಿ ಗಾರ್ಮೆಂಟ್ಸ್ ನ ಮಾನವ ಸಂಪನ್ಮೂಲಾಧಿಕಾರಿ ಅನಿಲ್, ಸಂಘಟನೆಯ ಮುಖಂಡರಾದ ಸಾವಿತ್ರಮ್ಮ, ಮಂಗಳಮ್ಮ, ಉಮಾ, ಮಹಾದೇವಮ್ಮ, ಸರಿತಾ, ಸವಿತಾ, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.