ADVERTISEMENT

ಹಬ್ಬ ಹಬ್ಬ ಮೈಸೂರು ಹಬ್ಬ..!

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 7:35 IST
Last Updated 19 ಫೆಬ್ರುವರಿ 2012, 7:35 IST

ಮೈಸೂರು: `ಹಬ್ಬ ಹಬ್ಬ ಮೈಸೂರು ಮಕ್ಕಳು ಮಾಡೋ ಹಬ್ಬ.. ಮಿತವಾಗಿ ನೀರನ್ನು ಬಳಸಿ, ಮಾಹಿತಿ ಹಕ್ಕು ಪಡೆಯಿರಿ.. ಹಬ್ಬ ಹಬ್ಬ ಮೈಸೂರು ಮಕ್ಕಳ ಹಬ್ಬ~..`ಗಣನಾಯಕಾಯ ಗಣದೈವತಾಯ~..ದೇಶಭಕ್ತಿ ಗೀತೆ, ನೃತ್ಯ..ಹೀಗೆ ಎಳೆಬಿಸಿಲ ನಡುವೆಯೂ ವರ್ಣರಂಜಿತ ಕಾರ್ಯಕ್ರಮಗಳಿಗೆ ಅಲ್ಲಿ ಕೊರತೆ ಇರಲಿಲ್ಲ.

-ನಗರದ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದ ಬಿ.ವಿ.ಕಾರಂತ ರಂಗಮಂದಿರದಲ್ಲಿ ಮೈಸೂರು ಮಕ್ಕಳ ಚಳವಳಿ ವತಿಯಿಂದ (ಸಿಎಂಸಿಎ) ಶನಿವಾರ ಏರ್ಪಡಿಸಿದ್ದ `ಮೈಸೂರು ಹಬ್ಬ~ ಕಾರ್ಯಕ್ರಮ ಮಕ್ಕಳಿಗೆ ವಿನೂತನ ವೇದಿಕೆ ಒದಗಿಸಿತು. ನಗರದ 40ಕ್ಕೂ ಹೆಚ್ಚು ಶಾಲೆಗಳ 2 ಸಾವಿರಕ್ಕೂ ಅಧಿಕ ಮಕ್ಕಳು `ಸಕ್ರಿಯ ಪೌರ~ರಾಗಿ ಪಾಲ್ಗೊಂಡು ಹೆಮ್ಮೆಯಿಂದ ಬೀಗಿದರು.

ಸಾಮಾನ್ಯವಾಗಿ ಕಾರ್ಯಕ್ರಮದಲ್ಲಿ ನಿರೂಪಣೆ, ವರದಿ ವಾಚನ, ವಂದನಾರ್ಪಣೆ ಎಲ್ಲವನ್ನೂ ದೊಡ್ಡವರೇ ಮಾಡುವುದು ವಾಡಿಕೆ. ಆದರೆ, ಸಿಎಂಸಿಎ ಮಾತ್ರ ಮಕ್ಕಳಿಗೆ ವೇದಿಕೆಯನ್ನು ಬಿಟ್ಟು ಕೊಟ್ಟಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ವೇದಿಕೆ ಮೇಲೆ ನಿಂತು ಅರಳು ಹುರಿದಂತೆ ಮಾತನಾಡುತ್ತಿದ್ದರೆ ಬೆರಗಾಗುವ ಸರದಿ ಪ್ರೇಕ್ಷಕರದ್ದು. ಎಳೆಬಿಸಿಲನ್ನೂ ಲೆಕ್ಕಿಸದೇ ಬೆಳಗಿನ ಜಾವವೇ ವಿದ್ಯಾರ್ಥಿಗಳು ತಂಡೋಪತಂಡವಾಗಿ ವಸ್ತು ಪ್ರದರ್ಶನ ಆವರಣದಲ್ಲಿ ಜಮಾಯಿಸಿ, ನೆರೆದವರಲ್ಲಿ `ಪೌರ ಜಾಗೃತಿ~ ಉಂಟು ಮಾಡಿದರು.


ಬೃಂದಾವನ ಪ್ರೌಢಶಾಲೆ, ವಿಜಯ ವಿಠಲ, ರೋಟರಿ ವೆಸ್ಟ್, ಅಂಡಲಸ್ ಶಾಲೆ, ಆಚಾರ್ಯ ವಿದ್ಯಾಲಯ, ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಪ್ರೌಢಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆ ಮೂಲಕ ಚಪ್ಪಾಳೆ ಗಿಟ್ಟಿಸಿದರು.

ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, `ತಂದೆ-ತಾಯಿಗಳು ಮಕ್ಕಳ ಮಾತುಗಳನ್ನು ಕೇಳುತ್ತಾರೆ. ಈ ಹಿನ್ನೆಲೆಯಲ್ಲಿ ಸಿಎಂಸಿಎ ಪೌರ ಪ್ರಜ್ಞೆ ಚಳವಳಿ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ~ ಎಂದರು.

ಉಪ ಮೇಯರ್ ಎಂ.ಜೆ.ರವಿಕುಮಾರ್, ಪೌರ ಪ್ರಜ್ಞೆಗಾಗಿ ಮಕ್ಕಳ ಚಳವಳಿಯ ರಾಷ್ಟ್ರೀಯ ಸಮನ್ವಯಾಧಿಕಾರಿ ಪ್ರಿಯಾ ಕೃಷ್ಣಮೂರ್ತಿ, ಪಾಲಿಕೆ ಸದಸ್ಯೆ ಎಂ.ಮಹದೇವಮ್ಮ, ಸಿಎಂಸಿಎ ಸಮನ್ವಯಾಧಿಕಾರಿ ಪಿ.ವಿ.ರಾಮದಾಸ್ ಹಾಜರಿದ್ದರು.
****

 ಶೋಷಣೆ, ಭ್ರಷ್ಟಾಚಾರ: ಅಜಯ್ ಬೇಸರ

ಮೈಸೂರು: `ಎಲ್ಲೆಡೆ ಶೋಷಣೆ, ಭ್ರಷ್ಟಾಚಾರ ಹೆಚ್ಚಾಗಿದ್ದು ಜಿಗುಪ್ಸೆ ಉಂಟು ಮಾಡುತ್ತಿದೆ. ಆದ್ದರಿಂದ ಮಕ್ಕಳು ಸಕ್ರಿಯ ಪೌರರಾಗಿ ಶೋಷಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಬೇಕು~ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಹೇಳಿದರು.

ವಸ್ತು ಪ್ರದರ್ಶನ ಮೈದಾನದ ಬಿ.ವಿ.ಕಾರಂತ ರಂಗಮಂದಿರದಲ್ಲಿ ಸಿಎಂಸಿಎ ಭಾನುವಾರ ಏರ್ಪಡಿಸಿದ್ದ `ಮೈಸೂರು ಹಬ್ಬ~ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಅಧಿಕಾರಿಗಳು ಅಧಿಕಾರದ ಜೊತೆ ಜವಾಬ್ದಾರಿಯೂ ಇದೆ ಎಂಬುದನ್ನು ಮರೆಯಬಾರದು. ವಿದ್ಯಾರ್ಥಿಗಳು ನಾಗರಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಅಧಿಕಾರಿಗಳಿಗೆ ಪ್ರಶ್ನಿಸುವ ಮೂಲಕ ಕೆಲಸ ಮಾಡಿಸಿಕೊಳ್ಳಬೇಕು~ ಎಂದು ಹೇಳಿದರು.

ಬಹುಮಾನ ವಿತರಣೆ:ಇದೇ ಸಂದರ್ಭದಲ್ಲಿ ಅವಿಲಾ ಕಾನ್ವೆಂಟ್, ಅಂಡಲಸ್ ಪ್ರೌಢಶಾಲೆ, ಮಾನಸಗಂಗೋತ್ರಿ ಪ್ರೌಢಶಾಲೆ, ಆಚಾರ್ಯ ವಿದ್ಯಾಲಯ, ಬೃಂದಾವನ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ (ಮೇದಾರ ಬ್ಲಾಕ್) ಶಾಲೆಗಳಿಗೆ `ಅತ್ಯುತ್ತಮ ಶಾಲೆ~ ಹಾಗೂ `ಸಕ್ರಿಯ ಪೌರತ್ವ~ ಪ್ರಶಸ್ತಿ ನೀಡಲಾಯಿತು.

ದೀಕ್ಷಿತಾ, ಮಾತೃಮಂಡಳಿ ಪ್ರೌಢಶಾಲೆ (ಪ್ರಥಮ), ಶಿವುಕುಮಾರ್-ಲೋಕೇಶ್, ಜೆಎಸ್‌ಎಸ್ ಬಾಲ ಜಗತ್ತು (ದ್ವಿತೀಯ), ವರುಣ್ ಎಸ್.ಬಾಪು-ಪೂರ್ಣ ಪ್ರಜ್ಞಾ, ವಿಜಯ ವಿಠಲ ಪ್ರೌಢಶಾಲೆ (ತೃತೀಯ) ಬಹುಮಾನ ಪಡೆದರು. ಸಂಚಾರ ಪೊಲೀಸರು ಏರ್ಪಡಿಸಿದ್ದ ಪೋಸ್ಟರ್ ಸ್ಪರ್ಧೆಯಲ್ಲಿ ವಿಜಯ ವಿಠಲ ಪ್ರೌಢಶಾಲೆ (ಪ್ರಥಮ), ಗಿರಿಯಾಭೋವಿ ಪಾಳ್ಯದ ಜೆಎಸ್‌ಎಸ್ ಪ್ರೌಢಶಾಲೆ (ದ್ವಿತೀಯ), ಶ್ರೀರಾಮಪುರ ಜೆಎಸ್‌ಎಸ್ ಪ್ರೌಢಶಾಲೆ (ತೃತೀಯ), ಮಾದರಿ (ಮಾಡೆಲ್) ತಯಾರಿಕೆ ಸ್ಪರ್ಧೆಯಲ್ಲಿ ಅವಿಲಾ ಕಾನ್ವೆಂಟ್ (ಪ್ರಥಮ), ಶಾರದಾ ವಿಲಾಸ ಸರ್ಕಾರಿ ಪ್ರೌಢಶಾಲೆ (ದ್ವಿತೀಯ) ಹಾಗೂ ಮಹರ್ಷಿ ಶಾಲೆ (ತೃತೀಯ)   ಬಹುಮಾನ ಪಡೆದುಕೊಂಡವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.