ಮೈಸೂರು: ರಂಗಾಯಣದ ಭೂಮಿಗೀತದಲ್ಲಿ ಜ. 16ರಂದು ಸಂಜೆ 5 ಗಂಟೆಗೆ ಜಾನಪದೋತ್ಸವದಲ್ಲಿ ‘ತಮಾಶಾ’ ಪ್ರಯೋಗಗೊಳ್ಳಲಿದೆ.
ಇದನ್ನು ಧಾರವಾಡ ರಂಗಾಯಣದ ಕಲಾವಿದರು ಪ್ರಸ್ತುತಪಡಿಸುವರು. ಮುಂಬೈ ವಿಶ್ವವಿದ್ಯಾಲಯದ ಲೋಕ ಕಲಾ ಅಕಾಡೆಮಿ ವಿಭಾಗದ ಮುಖ್ಯಸ್ಥ ರಾದ ತಮಾಶಾ ರಂಗಪ್ರಕಾರದ ರಾಷ್ಟ್ರೀಯಮಟ್ಟದ ತಜ್ಞರಾದ ಪ್ರೊ.ಗಣೇಶ ಚೆಂದನಶಿವೆ ಹಾಗೂ ಅವರ ತಂಡ ನಟರಿಗೆ ತಮಾಶಾ ರಂಗ ಪ್ರಕಾರದಲ್ಲಿ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದ್ದಾರೆ.
ತಮಾಶಾ ಮರಾಠಿ ಸಂಸೃತಿಯ ಜತೆಗೆ ಜನಪ್ರಿಯ ಹಾಗೂ ರಂಜನೀಯ ಜನಪದ ರಂಗಪ್ರಕಾರ. ಅಲ್ಲಿಯ ಗ್ರಾಮೀಣ ರಂಗಭೂಮಿಯ ಅಸಲು ಮಣ್ಣಿನ ವಾಸನೆ ಪಡೆದ ಈ ರಂಗಪ್ರಕಾರದ ಕುಣಿತ, ಲಾವಣಿ ಸಂಗೀತಕ್ಕೆ ಮಾರುಹೋಗದವರೇ ಇಲ್ಲ.
ತಮ-ಆಶಾ (ಕತ್ತಲೆಯಿಂದ ಬೆಳಕಿನಕಡೆಗೆ) ತಮಾಶಾ ರಂಗಪ್ರಕಾರವು ಈ ದೇಶದ ಭಕ್ತಿಪಂಥದ ಹಲವಾರು ಪರಂಪರೆಯಲ್ಲಿ ಬೆಳೆದಿದೆ. ಕೃಷ್ಣ ಕಥಾನಕದ ಆಧ್ಯಾತ್ಮಿಕತೆ ಕಾಲಕ್ರಮೇಣ ಈ ರಂಗಪ್ರಕಾರದಲ್ಲಿ ಬೇರೆ ರೂಪ ಪಡೆದು ತನ್ನ ಪ್ರಸ್ತುತೆಯಲ್ಲಿ ಹೆಚ್ಚು ಹೆಚ್ಚು ಸಾಮಾಜಿಕತೆ ಮತ್ತು ಜನಪ್ರಿಯ ರಂಜನೀಯ ಅಂಶ ಸೇರಿಸಿಕೊಂಡಿತು.
19ನೇ ಶತಮಾನದಲ್ಲಿ ಮಹಾ ರಾಷ್ಟ್ರದಲ್ಲಿ ಪ್ರಖರವಾಗಿ ಕಾಣಿಸಿಕೊಂಡ ವರ್ಣಾಶ್ರಮದ ವಿರುದ್ಧದ ಪ್ರತಿಭಟನೆ ಧ್ವನಿ ಈ ಆಟದಲ್ಲಿ ವಿಡಂಬನಾತ್ಮಕವಾಗಿ ನುಸುಳಿಕೊಂಡಿತು. ಶೃಂಗಾರ ಮತ್ತು ಹಾಸ್ಯ ಈ ಆಟದ ಪ್ರಸ್ತುತಿಯ ಪ್ರಮುಖ ಅಂಗಗಳಾದವು.
ದೇವಾನುದೇವತೆ ಗಳನ್ನು ಕಚಗುಳಿ ಇಡುವ ಸಂಭಾಷಣೆಯ ಮೂಲಕ ವಿಮರ್ಶಿಲಾಯಿತು. ಒಂದು ಕಾಲಘಟ್ಟದಲ್ಲಿ ನಮ್ಮಲ್ಲಿ ಸಂಗ್ಯಾಬಾಳ್ಯಾ ಆಟ ನೋಡುವುದಕ್ಕೂ ಸಾಮಾಜಿಕ ಅಡೆತಡೆಗಳಿದ್ದವೋ ಹಾಗೆಯೇ ತಮಾಶಾ ಆಟಕ್ಕೂ ಇತ್ತು. ಈಗ ಆ ಅಡೆತಡೆ ಗಳಾವವೂ ಉಳಿದಿಲ್ಲ. ಈಗ ಈ ಆಟವು ರಾಷ್ಟ್ರೀಯಮಟ್ಟದ ರಂಗಪ್ರಕಾರವಾಗಿ ಬೆಳೆದಿದೆ.
ತಮಾಶಾಕ್ಕೂ ಉತ್ತರ ಕರ್ನಾಟಕದ ಹಲವಾರು ಸಣ್ಣಾಟಗಳ ರಂಗಾಂಶಗಳಲ್ಲಿ ಪರಸ್ಪರ ಕೊಡುಕೊಳೆ ನಡೆದಿದೆ. ಈ ಆಟದ ನೃತ್ಯದ ಮೇಲೆ ಕಥಕ್ ನೃತ್ಯದ ಪ್ರಭಾವವಿದೆ. ಆಶ್ಚರ್ಯದ ಸಂಗತಿ ಅಂದರೆ, ಕಂಪನಿ ನಾಟಕದ ಪ್ರಭಾವ ಈ ಆಟದ ಮೇಲೆ ಅಷ್ಟಾಗಿ ಆಗಿಲ್ಲ.
ಇಂತಹ ಒಂದು ಮರಾಠಿ ಮಣ್ಣಿನ ಜನಪ್ರಿಯ ಜನಪದ ರಂಗಪ್ರಕಾರ ತಮಾಶಾವನ್ನು ಧಾರವಾಡ ರಂಗಾಯಣದ ನಟರು ಅನುಸಂಧಾನ ನಡೆಸಲಿದ್ದಾರೆ ಎನ್ನುತ್ತಾರೆ ಧಾರವಾಡ ರಂಗಾಯಣದ ನಿರ್ದೇಶಕ ಡಾ.ಪ್ರಕಾಶ ಗರುಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.