ADVERTISEMENT

ಡ್ರಗ್ಸ್‌ ದಂದೆ: ಸಿಸಿಬಿ ಕಾರ್ಯಾಚರಣೆ

ಮೈಸೂರಿನಲ್ಲಿ ವಿವಿಧೆಡೆ ದಾಳಿ ನಡೆಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:08 IST
Last Updated 6 ಸೆಪ್ಟೆಂಬರ್ 2020, 16:08 IST
ವೃತ್ತಿಪರ ಆರೋಪಿತರ ಮನೆಗಳಲ್ಲಿ ಮಾದಕ ವಸ್ತುವಿನ ಶೋಧ ನಡೆಸಿದ ಸಿಸಿಬಿ ಪೊಲೀಸರು
ವೃತ್ತಿಪರ ಆರೋಪಿತರ ಮನೆಗಳಲ್ಲಿ ಮಾದಕ ವಸ್ತುವಿನ ಶೋಧ ನಡೆಸಿದ ಸಿಸಿಬಿ ಪೊಲೀಸರು   

ಮೈಸೂರು: ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಮಾರಾಟಗಾರರು/ಸಂಗ್ರಹಕರ ವಿರುದ್ಧ ಮೈಸೂರು ನಗರ ಪೊಲೀಸ್‌ ಕಮಿಷನರೇಟ್‌ನ ಸಿಸಿಬಿ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದರು.

ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಮಾದಕ ವಸ್ತು ಜಾಲ ಪತ್ತೆಯಾದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಶನಿವಾರ ಕಟ್ಟುನಿಟ್ಟಿನ ಸೂಚನೆ ನೀಡಿದ, ಬೆನ್ನಿಗೆ ಈ ದಾಳಿ ನಡೆದಿದೆ.

ಸಿಸಿಬಿ ಎಸಿಪಿ ಮರಿಯಪ್ಪ ನೇತೃತ್ವದಲ್ಲಿ 90 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ತಂಡ ಭಾನುವಾರ ನರಸಿಂಹರಾಜ, ಮಂಡಿ, ಉದಯಗಿರಿ ಹಾಗೂ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದೆ.

ADVERTISEMENT

ಮಾದಕ ವಸ್ತುಗಳು ಮಾರಾಟವಾಗುವ ಅನುಮಾನವಿರುವ ಸ್ಥಳಗಳು ಹಾಗೂ ಈ ಹಿಂದೆ ಗಾಂಜಾ/ಮಾದಕ ವಸ್ತುಗಳನ್ನು ಮಾರಾಟ ಮಾಡಿ ದಸ್ತಗಿರಿಯಾಗಿದ್ದ ವೃತ್ತಿಪರ ಆರೋಪಿಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ನಡೆಸಿತು.

ದಾಳಿಯ ವೇಳೆ ಕೆಲವು ವೃತ್ತಿಪರ ಆರೋಪಿಗಳು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು, ಖಾಲಿ ಮಾಡಿಕೊಂಡು ಹೋಗಿದ್ದು ಪತ್ತೆಯಾಗಿದೆ. ಹಲವರ ಮನೆಗಳಲ್ಲಿ ಯಾವೊಂದು ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.‌

ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಣೆ ಬಗ್ಗೆ ಮಾಹಿತಿಯಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ 100, 2418339ಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕುಟುಂಬಗಳ ನಡುವೆ ಹೊಡೆದಾಟ
ನಗರದ ಹೊರ ವಲಯದಲ್ಲಿನ ಇಂದಿರಾಗಾಂಧಿ ಬಡಾವಣೆಯ ಏಕಲವ್ಯ ನಗರದಲ್ಲಿ ಹಣಕಾಸಿನ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.

ಗಲಾಟೆಯಲ್ಲಿ ಸ‌ಂಬಂಧಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಚಿಕ್ಕರಂಗಪ್ಪ (38) ಹಲ್ಲೆಗೆ ಒಳಗಾದ ವ್ಯಕ್ತಿ.

ಕುಮಾರ್, ಬಸಪ್ಪ, ಸದಾನಂದ್, ಅಂಬಿಕಾ, ಎಲ್ಲಮ್ಮ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕರಂಗಪ್ಪನಿಗೆ ಹಲ್ಲೆ ಮಾಡಿದ ವಿಡಿಯೊ ವೈರಲ್‌ ಆಗಿದ್ದು, ಹಲ್ಲೆ ನಡೆಸಿದವರ ವಿರುದ್ಧ ಚಿಕ್ಕರಂಗಪ್ಪ ದೂರು ನೀಡಿದ್ದಾರೆ ಎಂದು ಮೇಟಗಳ್ಳಿ ಪೊಲೀಸರು ತಿಳಿಸಿದ್ದಾರೆ.

ಸ್ಕೂಟರ್ ಡಿಕ್ಕಿಯಲ್ಲಿ ಹಾವು
ಮೈಸೂರಿನ ದಿವಾನ್ಸ್ ರಸ್ತೆಯ ನಿವಾಸಿಯೊಬ್ಬರ ಸ್ಕೂಟರ್ ಡಿಕ್ಕಿಯಲ್ಲಿ ನಾಗರ ಹಾವಿನ ಮರಿಯೊಂದು ಪತ್ತೆಯಾಗಿದೆ.

ವಿಷಯ ತಿಳಿದೊಡನೆ ಸ್ಥಳಕ್ಕೆ ಬಂದ ಸೂರ್ಯಕೀರ್ತಿ ಹಾವನ್ನು ಹಿಡಿದು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.