ADVERTISEMENT

ಕುಡಿಯುವ ನೀರಿಗೆ ₹ 5 ಕೋಟಿ ಅನುದಾನ: ಶಾಸಕ ಅಡಗೂರು ಎಚ್‌.ವಿಶ್ವನಾಥ್

ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 9:41 IST
Last Updated 31 ಮೇ 2019, 9:41 IST
ಹುಣಸೂರು ನಗರದ ವಾರ್ಡ್ 9 ರಲ್ಲಿ ಶಾಸಕ ಅಡಗೂರು ಎಚ್ ವಿಶ್ವನಾಥ್, ಗುರುವಾರ ಅಲ್ಪ ಸಂಖ್ಯಾತ ಸಮುದಾಯ ಕಾಲೋನಿಯಲ್ಲಿ ಮೂಲಭೂತ ಸವಲತ್ತು ಕಾಮಗಾರಿಗೆ ಚಾಲನೆ ನೀಡಿದರು
ಹುಣಸೂರು ನಗರದ ವಾರ್ಡ್ 9 ರಲ್ಲಿ ಶಾಸಕ ಅಡಗೂರು ಎಚ್ ವಿಶ್ವನಾಥ್, ಗುರುವಾರ ಅಲ್ಪ ಸಂಖ್ಯಾತ ಸಮುದಾಯ ಕಾಲೋನಿಯಲ್ಲಿ ಮೂಲಭೂತ ಸವಲತ್ತು ಕಾಮಗಾರಿಗೆ ಚಾಲನೆ ನೀಡಿದರು   

ಹುಣಸೂರು: ‘₹ 5 ಕೋಟಿ ಅನುದಾನದಲ್ಲಿ ನಗರದ ಕುಡಿಯುವ ನೀರಿನ ಸುಧಾರಣೆಗೆ ಒತ್ತು ನೀಡಲಾಗಿದೆ’ ಎಂದು ಶಾಸಕ ಅಡಗೂರು ಎಚ್‌.ವಿಶ್ವನಾಥ್ ಹೇಳಿದರು.

ನಗರದ ಅಲ್ಪ ಸಂಖ್ಯಾತ ಸಮುದಾಯ ಕಾಲೋನಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು 2018–19ನೇ ಸಾಲಿನಲ್ಲಿ ಸರ್ಕಾರ ಕುಡಿಯುವ ನೀರಿನ ಸುಧಾರಣೆಗೆ ₹ 5 ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು.

ಈ ಅನುದಾನದಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉನ್ನತೀಕರಣ, ಹುಣಸೂರು ನಗರಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಚುಂಚನಕಟ್ಟೆ ಬಳಿಯಲ್ಲಿ ಕಟ್ಟೆ ಎತ್ತರಿಸುವುದು ಹಾಗೂ ಪಂಪ್ ಹೌಸ್‌ನಲ್ಲಿ ವಿದ್ಯುತ್ ಮೋಟಾರ್ ಸಾಮರ್ಥ್ಯ ಹೆಚ್ಚಿಸಲು ಬಳಸಿಕೊಳ್ಳಲಾಗುವುದು. ಉಳಿದ ₹ 1.50 ಲಕ್ಷ ಅನುದಾನವನ್ನು ಬೀದಿದೀಪಗಳ ನವೀಕರಣ ಹಾಗೂ ಘನತ್ಯಾಜ್ಯ ಘಟಕಕ್ಕೆ ಹೆಚ್ಚುವರಿ ಭೂಮಿ ಖರೀದಿಸಲು ಬಳಸಿಕೊಳ್ಳಲು ಯೋಜನೆ ಸಿದ್ಧಗೊಂಡಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿಯಿಂದ ಕ್ಷೇತ್ರಕ್ಕೆ ₹ 5 ಕೋಟಿ ಅನುದಾನ ಮಂಜೂರಾಗಿದೆ. ಅದನ್ನು ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಬಳಸಲಾಗುವುದು. ಜತೆಗೆ ಪ್ರವಾಸೋದ್ಯಮ ಇಲಾಖೆಯಿಂದ ₹ 25 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಬೆಟ್ಟ ಹಾಗೂ ಭೈರವೇಶ್ವರ ಬೆಟ್ಟದ ರಸ್ತೆಯನ್ನು ಅಭವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.

ಈಗಾಗಲೇ ರಾಮೇನಹಳ್ಳಿ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ₹ 1 ಕೋಟಿ ಅಂದಾಜು ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಮೊದಲ ಕಂತಿನಲ್ಲಿ ₹ 50 ಲಕ್ಷ ನಿರೀಕ್ಷೆಯಲ್ಲಿದ್ದೇವೆ ಎಂದರು.

ಅಲ್ಲದೆ, ಅಂಬೇಡ್ಕರ್ ಭವನ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೆ, ಭವನವನ್ನು ಮದುವೆಗಳಿಗೆ ನೀಡಲು ನಿರ್ಮಿಸಿಲ್ಲ. ಬದಲಿಗೆ ಭವನವನ್ನು ಅಧ್ಯಯನ ಕೇಂದ್ರವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ನಂತರ ಚಿಕ್ಕಹುಣಸೂರು ಬಡಾವಣೆಯ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ, ಕೆರೆ ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಸರ್ವೆನಡೆಸಿ ಬಡಾವಣೆಯ ನಿವಾಸಿಗಳ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಬೇಕು ಎಂದು ಆದೇಶಿಸಿದರು.

ಈ ವೇಳೆ ನಗರಸಭೆ ಮಾಜಿ ಸದಸ್ಯ ಸುನಿತಾ ಜಯರಾಮೇಗೌಡ, ಸತೀಶ್‌ ಕುಮಾರ್‌, ಶಿವಕುಮಾರ್‌, ಗುಲ್ನಾಜ್‌, ಪೌರಾಯುಕ್ತ ವೀಣಾ ವಿ. ಆಳ್ವ ಹಾಗೂ ಅಧಿಕಾರಿಗಳುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.