ADVERTISEMENT

‌ಬಸವ ಭವನ ನಿರ್ಮಾಣಕ್ಕೆ ₹10 ಲಕ್ಷ: ಸಂಸದ ವಿ.ಶ್ರೀನಿವಾಸ ಪ್ರಸಾದ್

ಬಸವೇಶ್ವರ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:17 IST
Last Updated 25 ಜೂನ್ 2022, 4:17 IST
ಸರಗೂರು ಪಟ್ಟಣದಲ್ಲಿ ಶುಕ್ರವಾರ ನಡೆದ ಜಗಜ್ಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ, ಶಾಸಕ ಈಶ್ವರ ಖಂಡ್ರೆ ಮಾತನಾಡಿದರು (ಎಡ ಚಿತ್ರ). ಬಸವ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು
ಸರಗೂರು ಪಟ್ಟಣದಲ್ಲಿ ಶುಕ್ರವಾರ ನಡೆದ ಜಗಜ್ಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ, ಶಾಸಕ ಈಶ್ವರ ಖಂಡ್ರೆ ಮಾತನಾಡಿದರು (ಎಡ ಚಿತ್ರ). ಬಸವ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು   

ಸರಗೂರು: ‘ಸಾಮಾಜಿಕ ಕಾಂತ್ರಿಯ ಕಹಳೆ ಮೊಳಗಿಸುವ ಮೂಲಕ ಸಮಾನತೆ ತರಲು ಪ್ರಯತ್ನಿಸಿದವರಲ್ಲಿ ಬಸವಣ್ಣ ಮೊದಲಿಗರು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆ ಸಮೀಪದ ವೀರಶೈವ-ಲಿಂಗಾಯತ ಸಮಾಜದ ನಿವೇಶನದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸರಗೂರು ಹಾಗೂ ಎಚ್.ಡಿ.ಕೋಟೆ ತಾಲ್ಲೂಕು ಘಟಕದಿಂದ ನಡೆದ ಬಸವೇಶ್ವರ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನವರನ್ನು ನಾವು ಜಗಜ್ಜ್ಯೋತಿ, ವಿಶ್ವಗುರು... ಹೀಗೆ ಹಲ ವಾರು ವಿಶೇಷಗಳಿಂದ ಗುರುತಿಸುತ್ತೇವೆ. ಅಂದಿನ ಕಾಲಕ್ಕೆ ಸಮಾನತೆಯ ಸಂದೇಶ ಸಾರಿದ್ದರು. ಅವರ ತತ್ವ, ಆದರ್ಶಗಳು ಜೀವನದಲ್ಲಿ ಬಹಳ ಮುಖ್ಯ’ ಎಂದು ಹೇಳಿದರು.

ADVERTISEMENT

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ, ಶಾಸಕ ಈಶ್ವರ ಖಂಡ್ರೆ ಮಾತನಾಡಿ, ‘ಬಸವಣ್ಣನವರ ತತ್ವ-ಸಿದ್ಧಾಂತಗಳು ವೈಜ್ಞಾನಿಕ ಮತ್ತು ವೈಚಾರಿಕತೆ ತಳಹದಿಯ ಮೇಲೆ ಇರುತ್ತವೆ. ದುಡಿದು ತಿನ್ನಬೇಕು, ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಸಮಾಜಕ್ಕೆ ವಿನಿಯೋಗ ಮಾಡಬೇಕು ಎಂಬ ಅವರ ತಾತ್ವಿಕ ನೆಲೆಗಟ್ಟಿನ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ‘ಅನುಭವ ಮಂಟಪದಲ್ಲಿ ಎಲ್ಲಾ ವರ್ಗದವರು ಸೇರಿ ಚರ್ಚೆ ಮಾಡುತ್ತಿದ್ದರು. ಇಂದಿನ ಗ್ರಾಮ ಪಂಚಾಯಿತಿಗಳು ಅನುಭವ ಮಂಟಪಗಳಾಗಬೇಕಿತ್ತು. ಆದರೆ, ಅದು ಸಾಧ್ಯವಾಗದಿರುವುದು ನಮ್ಮ ದುರಂತ. ಸರಗೂರಿನಲ್ಲಿ ಬಸವ ಭವನ ನಿರ್ಮಾಣಕ್ಕೆ ನಿವೇಶನ ಖರೀದಿಸಿರುವುದು ಸಂತಸ ತಂದಿದೆ. ಬಸವ ಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರರ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಕೂರಿಸಿಕೆಇಬಿ ಕಚೇರಿ ಮುಂಭಾಗದಿಂದ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಿ ಸಮಾಜದ ನಿವೇಶನದವರೆಗೆ ಸಾಗಿತು. ಇದೇ ವೇಳೆ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹಾಂತ ಸ್ವಾಮೀಜಿ, ಮಹದೇವ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ, ಗುರುಶಾಂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ನಂದೀಶ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಡಾ.ಷಡಕ್ಷರಿ ಸ್ವಾಮೀಜಿ, ಕೆಂಡಗಣ್ಣ ಸ್ವಾಮೀಜಿ ಆಶೀರ್ವಚನ ನೀಡಿದರು.

ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ.ಶಿವರಾಜು, ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಸಚ್ಚಿದಾನದಮೂರ್ತಿ, ಕಾರ್ಯದರ್ಶಿ ರೇಣುಕಾಪ್ರಸನ್ನ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಮೂರ್ತಿ ಕಾನ್ಯ, ಜೆಎಸ್ಎಸ್ ಪ್ರೌಢಶಾಲೆಯ ಶಿಕ್ಷಕ ಸಿದ್ಧಲಿಂಗಸ್ವಾಮಿ, ಮಹಾಸಭಾ ಎಚ್.ಡಿ.ಕೋಟೆ ಅಧ್ಯಕ್ಷ ಮೊತ್ತ ಬಸವರಾಜಪ್ಪ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಫಾಲನೇತ್ರ, ಮಾಜಿ ಶಾಸಕ ಚಿಕ್ಕಣ್ಣ, ರಾಧಾಕೃಷ್ಣ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಡಾ.ಎಚ್.ವಿ.ಕೃಷ್ಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಗುರುಸ್ವಾಮಿ, ಯುವ ಘಟಕದ ಅಧ್ಯಕ್ಷ ಪರಶಿವಮೂರ್ತಿ, ಸಹಕಾರ ಸಂಘದ ಅಧ್ಯಕ್ಷ ಹಂಚೀಪುರ ಗಣಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.