ADVERTISEMENT

ವೈಯರ್ ಸುಡುತ್ತಿದ್ದ 10 ಮಂದಿ ಬಂಧನ

ಪರಿಸರ ಮಾಲಿನ್ಯ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 4:51 IST
Last Updated 18 ಜುಲೈ 2021, 4:51 IST
ದುಷ್ಕರ್ಮಿಗಳು ಘನತ್ಯಾಜ್ಯ ವಸ್ತುಗಳಿಗೆ ಬೆಂಕಿ ಹಾಕಿದ್ದ ಪ್ರದೇಶ
ದುಷ್ಕರ್ಮಿಗಳು ಘನತ್ಯಾಜ್ಯ ವಸ್ತುಗಳಿಗೆ ಬೆಂಕಿ ಹಾಕಿದ್ದ ಪ್ರದೇಶ   

ಮೈಸೂರು: ಇಲ್ಲಿನ ಭಾರತ್ ನಗರ ಸಮೀಪದ ಖಾಲಿ ನಿವೇಶನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ವೈಯರ್‌ಗಳಿಗೆ ಬೆಂಕಿ ಹಾಕಿ, ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದ 10 ಮಂದಿಯನ್ನು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಮಾನುಲ್ಲಾಖಾನ್, ಸಯ್ಯದ್ ರುಮಾನ್, ಅಮ್ಜದ್‌ಪಾಷಾ, ತೌಷಿಫ್ ಉಲ್ಲಾ, ರಿಯಾಜ್, ನದೀಮ್ ಉಲ್ಲಾ ಬೇಗ್, ಅಮೀದ್, ಅಬ್ದುಲ್ ವಾಹಿದ್, ಮಹಮ್ಮದ್ ತಾಹಿರ್ ಪಾಷಾ, ಆರೀಫ್‌ ಉಲ್ಲಾ ಬಂಧಿತರು.

ಇವರು ರಾಜೀವ್‌ನಗರ, ದೇವನೂರು 3ನೇ ಹಂತದ ಬಡಾವಣೆಯ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳಿಗೆ ರಾತ್ರಿ ಮತ್ತು ನಸುಕಿನ ವೇಳೆ ಬೆಂಕಿ ಹಚ್ಚುತ್ತಿದ್ದರು. ಸುತ್ತಮುತ್ತಲ ನಿವಾಸಿಗಳು ಹೊಗೆಯಿಂದ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ಆಸ್ತಮಾ ಸೇರಿದಂತೆ ಉಸಿರಾಟ ಸಂಬಂಧಿ ಕಾಯಿಲೆಗಳು ಸಾಮಾನ್ಯ ಎನ್ನುವಂತಾಗಿತ್ತು. ಈ ಕುರಿತು ಗ್ರಾಮ ಪಂಚಾಯಿತಿಯಾಗಲಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ಪಾಲಿಕೆಯಾಗಲಿ ನಿರ್ಲಕ್ಷ್ಯ ವಹಿಸಿತ್ತು. ಮಫ್ತಿನಲ್ಲಿ ರಾತ್ರಿ ಹಾಗೂ ನಸುಕಿನ ವೇಳೆ ಕಾರ್ಯಾಚರಣೆ ನಡೆಸಿ, ಬೆಂಕಿ ಹಾಕುವಾಗ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಜೂನ್ 23ರಂದು ‘ಹೊಗೆಗೆ ನಲುಗಿದ ಜನತೆ’ ಶೀರ್ಷಿಕೆಯಡಿ ‘‍ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತನಿಖೆ ನಡೆಸಲು ಸೂಚಿಸಿದ್ದರು. ಇನ್‌ಸ್ಪೆಕ್ಟರ್ ಶಶಿಕುಮಾರ್, ಸಿಬ್ಬಂದಿಯಾದ ಕೆಂಪಣ್ಣ, ತಿರುಮಲೇಶ್, ಎಎಸ್‌ಐ ಶಾಂತ ಲಿಂಗಯ್ಯ, ನಾರಾಯಣಮೂರ್ತಿ, ಸೋಮಶೇಖರ್, ರಘು, ಗಿರೀಶ್, ಪ್ರಸಾದ್, ದೇವಪ‍್ಪಶರಣಪ್ಪ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.