ADVERTISEMENT

ಮೈಸೂರಿನಲ್ಲಿ ಸೆಂಚುರಿ ಹೊಡೆದ ಪೆಟ್ರೋಲ್‌ ಬೆಲೆ

ಹೈರಣಾದ ಜನಸಾಮಾನ್ಯರು; ತತ್ತರಿಸಿದ ಹೋದ ಚಾಲಕರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 14:51 IST
Last Updated 20 ಜೂನ್ 2021, 14:51 IST
ಮೈಸೂರಿನಲ್ಲಿ ಭಾನುವಾರ ₹ 100 ತಲುಪಿದ ಪೆಟ್ರೋಲ್‌ನ್ನು ಕಂಡು ಹೈರಣಾದ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡರು
ಮೈಸೂರಿನಲ್ಲಿ ಭಾನುವಾರ ₹ 100 ತಲುಪಿದ ಪೆಟ್ರೋಲ್‌ನ್ನು ಕಂಡು ಹೈರಣಾದ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡರು   

ಮೈಸೂರು: ನಗರದಲ್ಲಿ ಪೆಟ್ರೋಲ್ ಬೆಲೆ ಭಾನುವಾರ ಒಂದು ಲೀಟರ್‌ಗೆ ₹ 100 ದಾಟಿದೆ. ಇದರಿಂದ ಜನಸಾಮಾನ್ಯರು ಹೈರಾಣಾಗಿದ್ದರೆ, ಚಾಲಕರು ತತ್ತರಿಸಿ ಹೋಗಿದ್ದಾರೆ.

ಚೆನ್ನೈನಿಂದ ‘ಬಿಪಿಸಿ’ ಕಂಪನಿಗೆ ತೈಲ ಸರಬರಾಜಾದರೆ, ‘ಎಚ್‌ಪಿಸಿ’ಗೆ ಹಾಸನದಿಂದ ಹಾಗೂ ಮಂಗಳೂರಿನಿಂದ ‘ಐಒಸಿ’ಗೆ ಸರಬರಾಜಾಗುತ್ತದೆ. ಈ ಎಲ್ಲದರ ದರ ₹ 100 ದಾಟಿದೆ. ಇವು ಎಷ್ಟು ದೂರದಿಂದ ಸರಬರಾಜಾಗುತ್ತದೆ ಎನ್ನುವುದರ ಆಧಾರದ ಮೇಲೆ ಬೆಲೆಯಲ್ಲಿ ಒಂದಷ್ಟು ಪೈಸೆಗಳ ಅಂತರ ಇದೆ. ಖಾಸಗಿ ಕಂಪನಿಗಳಾದ ಶೆಲ್ ಹಾಗೂ ಎಸ್ಸಾರ್‌ ಪೆಟ್ರೋಲ್‌ ಬಂಕ್‌ನಲ್ಲೂ ಈಗಾಗಲೇ ಪೆಟ್ರೋಲ್ ದರ ₹ 100 ಮುಟ್ಟಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೆಟ್ರೋಲಿಯಂ ಅಸೋಸಿಯೇಷನ್‌ ಗೌರವ ಅಧ್ಯಕ್ಷ ದಿನೇಶ್‌, ‘ಮೈಸೂರು ನಗರದಲ್ಲಿ ಒಟ್ಟು 80 ಪೆಟ್ರೋಲ್‌ ಬಂಕ್‌ಗಳಿವೆ. ಎಲ್ಲ ಬಂಕ್‌ಗಳಲ್ಲೂ ಪೆಟ್ರೋಲ್ ಬೆಲೆ ₹ 100ರ ಗಡಿ ದಾಟಿದೆ’ ಎಂದು ಹೇಳಿದರು.

ADVERTISEMENT

ಕಾರ್ಮಿಕರ ಮೇಲೆ ಬರೆ

‍ಪೆಟ್ರೋಲ್ ಬೆಲೆ ಹೆಚ್ಚಾಗಿರುವುದು ಕಾರ್ಮಿಕರ ಮೇಲೆ ಗದಾ ಪ್ರಹಾರ ನಡೆಸಿದಂತಾಗಿದೆ. ಜಿಲ್ಲೆಯಿಂದ ನಂಜನಗೂಡು, ಹೆಬ್ಬಾಳ, ತಾಂಡವಪುರ ಸೇರಿದಂತೆ ವಿವಿಧ ಭಾಗಗಳಲ್ಲಿರುವ ಕಾರ್ಖಾನೆಗಳಿಗೆ ದುಡಿಯಲು ಹೋಗವ ಕಾರ್ಮಿಕರಿಗೆ ಇದು ಸಹಿಸಲಾರದ ಹೊರೆ ಎನಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿನ್, ‘ಸರ್ ನಾನು ಇಮ್ಮಾವು ಗ್ರಾಮದವ. ತಾಂಡವಪುರದ ‘ಎಬಿಬಿ’ ಕಾರ್ಖಾನೆಗೆ ಹೋಗಲು ಹಿಂದೆ ₹ 1 ಸಾವಿರ ಮೌಲ್ಯದ ಪೆಟ್ರೋಲ್ ಬೇಕಾಗಿತ್ತು. ಈಗ ₹ 2 ಸಾವಿರ ಮೌಲ್ಯದ ಪೆಟ್ರೋಲ್‌ ಬೇಕಿದೆ. ಸಂಬಳ ಮಾತ್ರ ಅಷ್ಟೇ ಇದೆ. ಇದರ ಜತೆಗೆ, ಅಡುಗೆ ಅನಿಲ ಬೆಲೆ ದುಪ್ಪಟ್ಟಾಗಿದೆ. ₹ 3 ಸಾವಿರ ಒಂದು ತಿಂಗಳಿಗೆ ಮನೆ ಸಾಮಾನು ಸಿಗುತ್ತಿತ್ತು. ಈಗ ₹ 6 ಸಾವಿರ ಬೇಕಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.