ADVERTISEMENT

12 ಅಭ್ಯರ್ಥಿಗಳಿಂದ ಉಮೇದುವಾರಿಕೆ

ವಾಸು ಮೂರು ನಾಮಪತ್ರ ಸಲ್ಲಿಕೆ; ಮೆರವಣಿಗೆ, ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 9:33 IST
Last Updated 20 ಏಪ್ರಿಲ್ 2018, 9:33 IST

ಮೈಸೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು, ಎಚ್‌.ವಿಶ್ವನಾಥ್‌, ವಾಸು, ಅಬ್ದುಲ್‌ ಮಜೀದ್‌ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ 12 ಅಭ್ಯರ್ಥಿಗಳು ಗುರುವಾರ ಉಮೇದುವಾರಿಕೆ ಸಲ್ಲಿಸಿದರು.

9ನೇ ಬಾರಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ 70 ವರ್ಷ ವಯಸ್ಸಿನ ಎಚ್‌.ವಿಶ್ವನಾಥ್‌ ಅವರು ಹುಣಸೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಬೆಂಬಲಿಗರೊಂದಿಗೆ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿ ಹುಣಸೂರಿನ ಮಿನಿ ವಿಧಾನಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಅದಕ್ಕೂ ಮೊದಲು ಗಣಪತಿ ದೇವಸ್ಥಾನದಲ್ಲಿ ‘ಬಿ’ ಫಾರಂಗೆ ಪೂಜೆ ಸಲ್ಲಿಸಿದರು.

ಇನ್ಫೊಸಿಸ್‌ನ ಮಾಜಿ ಉದ್ಯೋಗಿ, ಸಾಫ್ಟ್‌ವೇರ್‌ ಎಂಜಿನಿಯರ್‌ ಮಾಲವಿಕ ಗುಬ್ಬಿವಾಣಿ ಅವರು ಚಾಮರಾಜ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜಗನ್ಮೋಹನ ಅರಮನೆಯಿಂದ ಬೆಂಬಲಿಗರೊಂದಿಗೆ ಪಾದ ಯಾತ್ರೆಯಲ್ಲಿ ಪಾಲಿಕೆ ಕಚೇರಿಗೆ ಸಾಗಿದರು.

ADVERTISEMENT

ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಪುನರಾಯ್ಕೆ ಬಯಸಿರುವ ವಾಸು ಅವರು 3 ನಾಮಪತ್ರ ಸಲ್ಲಿಸಿದರು.

‘ಚಾಮರಾಜ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಐದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಮಾಳವಿಕಾ ಎರಡು ಹಾಗೂ ವಾಸು ಮೂರು ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಕ್ಷೇತ್ರದ ಚುನಾವಣಾಧಿಕಾರಿ ಕೆ.ಎಚ್‌.ಜಗದೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ವಾಸು ಅವರು ಪಾಲಿಕೆ ಕಚೇರಿಗೆ ತಾವೇ ವಾಹನ ಚಾಲನೆ ಮಾಡಿಕೊಂಡು ಬಂದರು. ಅದಕ್ಕೂ ಮೊದಲು ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅವರೊಂದಿಗೆ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಪ್ರಕಾಶ್‌, ಲೋಕೇಶ್‌ ಗೌಡ ಇದ್ದರು.

ತಿ.ನರಸೀಪುರ, ಕೆ.ಆರ್‌.ನಗರ, ನಂಜನಗೂಡು, ವರುಣಾ, ಎಚ್‌.ಡಿ.ಕೋಟೆ ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಕೃಷ್ಣರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ವಿ.ಮಲ್ಲೇಶ್‌ ಅವರು ಬೆಂಬಲಿಗರೊಂದಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ‌ಆದರೆ, ಅವರು ‘ಬಿ’ ಫಾರಂ ಸಲ್ಲಿಸಿಲ್ಲ.

ಸಿದ್ದರಾಮಯ್ಯ, ಜಿಟಿಡಿ ಇಂದು ನಾಮಪತ್ರ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.‌ಸಿದ್ದರಾಮಯ್ಯ ಅವರು ಮಧ್ಯಾಹ್ನ 1 ಗಂಟೆಗೆ ಗಣಪತಿ ಮತ್ತು ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬೆಂಬಲಿಗರೊಂದಿಗೆ ಪಾದಯಾತ್ರೆಯಲ್ಲಿ ಮಿನಿ ವಿಧಾನಸೌಧದಲ್ಲಿರುವ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ತೆರಳಲಿದ್ದಾರೆ. ಶಾಸಕ, ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡರು ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ನೆರವೇರಿಸಿ ಮಧ್ಯಾಹ್ನ 2 ಗಂಟೆಗೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಮಹದೇವ್‌ ಆಸ್ತಿ ₹ 4.56 ಕೋಟಿ

ಪಿರಿಯಾಪಟ್ಟಣ: ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಅವರು ₹ 4.56 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ ₹ 1.27 ಕೋಟಿ ಮೌಲ್ಯದ್ದಾಗಿದ್ದು, ₹ 3.29 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮ ಬಳಿ 200 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 500 ಗ್ರಾಂ ಚಿನ್ನ ಹೊಂದಿರುವುದಾಗಿ ವಿವರ ನೀಡಿದ್ದಾರೆ. ಈ ಆಸ್ತಿಯಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳು ಹೆಸರಿನಲ್ಲಿರುವ ಒಟ್ಟು ಕುಟುಂಬದ ಆಸ್ತಿ ವಿವರ ಮತ್ತು ಮೌಲ್ಯವನ್ನು ಕೂಡ ಸಲ್ಲಿಸಿದ್ದಾರೆ.

ವಿಶ್ವನಾಥ್‌ ಆಸ್ತಿ ₹ 2.28 ಕೋಟಿ

ಹುಣಸೂರು: ಕೆ.ಆರ್‌.ನಗರ ಮತ್ತು ಮೈಸೂರಿನಲ್ಲಿ ಮನೆ, ಕೆ.ಆರ್‌.ನಗರ ತಾಲ್ಲೂಕಿನ ಮಾರಗೌಡನಹಳ್ಳಿಯಲ್ಲಿ ಪಿತ್ರಾರ್ಜಿತ ಆಸ್ತಿ 11.17 ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ 21.38 ಎಕರೆ ಭೂಮಿ ಇದೆ. ಈ ಎಲ್ಲದರ ಒಟ್ಟು ಮೌಲ್ಯ ₹ 2.28 ಕೋಟಿ ಎಂದು ಎಚ್.ವಿಶ್ವನಾಥ್‌ ಘೋಷಿಸಿದ್ದಾರೆ.

ತಮ್ಮ ಹೆಸರಿನಲ್ಲಿ 40 ಗ್ರಾಂ ಚಿನ್ನ, ಪತ್ನಿ ಹೆಸರಿನಲ್ಲಿ 300 ಗ್ರಾಂ ಚಿನ್ನ ಹಾಗೂ 3 ಕೆ.ಜಿ ಬೆಳ್ಳಿ, ತವರು ಮನೆಯ ಉಡುಗೊರೆ 30 ತೊಲ ಚಿನ್ನ ಇದೆ. 5 ಬ್ಯಾಂಕ್‌ ಖಾತೆಯಲ್ಲಿ ಒಟ್ಟು ₹ 3,31,001 ಹಾಗೂ ಪತ್ನಿ ಹೆಸರಿನಲ್ಲಿ ₹ 83,709 ಇದೆ. ಯಾವುದೇ ರೀತಿಯ ಸಾಲ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ವಾಸು ಆಸ್ತಿ ₹ 17 ಕೋಟಿ

ಮೈಸೂರು: ಚಾಮರಾಜದಿಂದ ಪುನರಾಯ್ಕೆ ಬಯಸಿರುವ ವಾಸು ಅವರು ₹ 4 ಲಕ್ಷ ನಗದು ಹಾಗೂ ಬ್ಯಾಂಕ್‌ ಖಾತೆಯಲ್ಲಿ ₹ 21.79 ಲಕ್ಷ ಹೊಂದಿದ್ದಾರೆ. ಅವರ ಮೂವರ ಮಕ್ಕಳ ಬಳಿ ಒಟ್ಟು ₹ 7.5 ಲಕ್ಷ ನಗದು ಹಾಗೂ ಬ್ಯಾಂಕ್‌ ಖಾತೆಯಲ್ಲಿ ಒಟ್ಟು ₹ 53 ಲಕ್ಷ ಇದೆ. ₹ 80 ಲಕ್ಷ ಮೌಲ್ಯದ 2.67 ಕೆ.ಜಿ ಚಿನ್ನ, 12 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಮಕ್ಕಳ ಬಳಿ 1 ಕೆ.ಜಿ ಚಿನ್ನವಿದೆ. ₹ 2 ಕೋಟಿ ಸಾಲ ಬರಬೇಕಾಗಿದೆ.

ತಮ್ಮ ಬಳಿ ಒಟ್ಟು ₹ 3.9 ಕೋಟಿ ಮೌಲ್ಯದ ಚರಾಸ್ತಿ, ಮಕ್ಕಳ ಬಳಿ ₹ 2 ಕೋಟಿ ಮೌಲ್ಯದ ಚರಾಸ್ತಿ ಇದೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ತಮ್ಮ ಬಳಿ ₹ 8 ಕೋಟಿ ಮೌಲ್ಯದ ಸ್ಥಿರಾಸ್ತಿ, ಮಕ್ಕಳ ಹೆಸರಿನಲ್ಲಿ ₹ 3.1 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ₹ ಒಟ್ಟು 2.11 ಕೋಟಿ ಸಾಲ ಮಾಡಿದ್ದಾರೆ. ವಾಸು ಅವರು ಟೊಯಾಟೊ ಇನೋವಾ ಕಾರು ಹೊಂದಿದ್ದಾರೆ.

ಮಾಲವಿಕ ಆಸ್ತಿ ₹ 10.64 ಕೋಟಿ

ಮಾಲವಿಕ ಅವರ ಬಳಿ ₹ 4.12 ಕೋಟಿ ಮೌಲ್ಯದ ಚರಾಸ್ತಿ, ಪತಿ ಬಳಿ ₹ 5.64 ಕೋಟಿ ಮೌಲ್ಯದ ಚರಾಸ್ತಿ ಇದೆ. ತಮ್ಮ ಬಳಿ ₹ 4 ಕೋಟಿ ಮೌಲ್ಯದ ಸ್ಥಿರಾಸ್ತಿ, ಪತಿ ಬಳಿ ₹ 1.9 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಮಲ್ಲೇಶ್‌ ಆಸ್ತಿ ₹ 38 ಸಾವಿರ

ಕೆ.ವಿ.ಮಲ್ಲೇಶ್‌ ಅವರ ಬಳಿ ₹ 38 ಸಾವಿರ ಮೌಲ್ಯದ ಚರಾಸ್ತಿ ಇದೆ. ಸ್ಥಿರಾಸ್ತಿ ಇಲ್ಲ.

**

ಕಳೆದ ಬಾರಿಗಿಂತ ನನ್ನ ಆಸ್ತಿ ಮೌಲ್ಯ ತಗ್ಗಿದೆ. ಬ್ಯಾಂಕಿನಲ್ಲಿನ ಠೇವಣಿ ಕೂಡ ಕಡಿಮೆ ಆಗಿದೆ. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳು ನನ್ನ ಕೈಹಿಡಿಯಲಿವೆ – ವಾಸು, ಕಾಂಗ್ರೆಸ್‌ ಅಭ್ಯರ್ಥಿ, ಚಾಮರಾಜ.

**

ಹುಣಸೂರು ಕ್ಷೇತ್ರ ಜಾತ್ಯತೀತವಾಗಿದ್ದು, ಜಾತಿ ನೆಲೆಗಟ್ಟಿನಲ್ಲಿ ರಾಜಕಾರಣ ಮಾಡುವವರಿಗೆ ಮತದಾರರು ಅಂತ್ಯ ಹಾಡಲಿದ್ದಾರೆ – ಎಚ್‌.ವಿಶ್ವನಾಥ್‌, ಜೆಡಿಎಸ್‌ ಅಭ್ಯರ್ಥಿ, ಹುಣಸೂರು.

**

ನರಸಿಂಹ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಮೊದಲಿಗ ನಾನು. ಮೊದಲ ನಾಮಪತ್ರ ನನ್ನದೇ ಆಗಿರುವುದು ಶುಭಸೂಚನೆ ಅಂದುಕೊಂಡಿದ್ದೇನೆ – ಅಬ್ದುಲ್ ಮಜೀದ್‌, ಎಸ್‌ಡಿಪಿಐ ಅಭ್ಯರ್ಥಿ, ನರಸಿಂಹರಾಜ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.