ನಂಜನಗೂಡು: ‘ರಾಜ್ಯದಾದ್ಯಂತ 200 ಪಶುಚಿಕಿತ್ಸಾಲಯ ಮಂಜೂರಾಗಿದ್ದು, ಮೈಸೂರು ಜಿಲ್ಲೆಗೆ 12 ಸೇರಿವೆ’ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದರು.
ತಾಲ್ಲೂಕಿನ ಕಂದೆಗಾಲ ಗ್ರಾಮದಲ್ಲಿ ಶನಿವಾರ ಪಶುಚಿಕಿತ್ಸಾ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಸಕ ದರ್ಶನ್ ಧ್ರುವನಾರಾಯಣ ತಾಲ್ಲೂಕಿಗೆ ಮೂರು ಪಶು ಆಸ್ಪತ್ರೆ ತೆರೆಯಲು ಬೇಡಿಕೆ ಸಲ್ಲಿಸಿದ್ದರು. ಕಂದೆಗಾಲ ಕಾಡಂಚಿನ ಗ್ರಾಮವಾಗಿದ್ದು, ಜಾನುವಾರುಗಳಿಗೆ ಚಿಕಿತ್ಸೆ ಪಡೆಯಲು ರೈತರು ಯಡಿಯಾಲದ ಕೇಂದ್ರ ಅವಲಂಬಿಸಬೇಕಾಗಿತ್ತು. ಈ ಭಾಗದಲ್ಲಿ 2,100ಕ್ಕೂ ಹೆಚ್ಚು ಜಾನುವಾರುಗಳಿದ್ದು, ಗ್ರಾಮಕ್ಕೆ ಪಶು ಚಿಕಿತ್ಸಾ ಕೇಂದ್ರದ ಅಗತ್ಯದ ಬಗ್ಗೆ ಇಲಾಖೆಗೆ ಮನವರಿಕೆಯಾಗಿತ್ತು. ಮುಂದಿನ ದಿನಗಳಲ್ಲಿ ಚಿಕಿತ್ಸಾ ಕೇಂದ್ರಕ್ಕೆ ಹೊಸ ಕಟ್ಟಡವನ್ನು ಮಂಜೂರು ಮಾಡಲಾಗುವುದು’ ಎಂದು ಹೇಳಿದರು.
‘ಇಲಾಖೆ ಬರಗಾಲ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ, ರಾಜ್ಯದಾದ್ಯಂತ ₹400 ಕೋಟಿ ವೆಚ್ಚದಲ್ಲಿ ಮೇವಿನ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 1.9 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‌ಗಳನ್ನು ವಿತರಿಸಲಾಗಿತ್ತು, ಹೀಗಾಗಿ ಬರಗಾಲದ ಪರಿಸ್ಥಿತಿಯಲ್ಲೂ ಹಾಲಿನ ಉತ್ಪಾದನೆ ಹೆಚ್ಚಿದೆ. ರಾಜ್ಯದಲ್ಲಿ 400 ಪಶುವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ‘ಜಿಲ್ಲೆಯಲ್ಲಿ ಜಾನುವಾರು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದ್ದು, 1965 ಕ್ಕೆ ಕರೆ ಮಾಡಿದರೆ ವೈದ್ಯರು ಮನೆ ಬಾಗಿಲಿಗೆ ಸಿಬ್ಬಂದಿಯೊಂದಿಗೆ ಬಂದು ಪಶುಗಳಿಗೆ ಚಿಕಿತ್ಸೆ ನೀಡಲಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮಂಜೇಗೌಡ, ಮುಖಂಡರಾದ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ನಾಗರಾಜ್, ಕುರಹಟ್ಟಿ ಮಹೇಶ್, ಶ್ರೀಕಂಠನಾಯ್ಕ, ಗ್ರಾ.ಪಂ. ಅಧ್ಯಕ್ಷ ಹರೀಶ್ ಕುಮಾರ್, ಕೆ.ಮಾರುತಿ, ಅಭಿನಂದನ್ ಪಟೇಲ್, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಶರಣಬಸಪ್ಪ ಉಪಸ್ಥಿತರಿದ್ದರು.
ಮೇವಿನ ಬಿತ್ತನೆ ಬೀಜ ವಿತರಣೆ ರಾಜ್ಯದಲ್ಲಿ 400 ಪಶುವೈದ್ಯರ ನೇಮಕ ಆ್ಯಂಬುಲೆನ್ಸ್ ಸೇವೆ ಆರಂಭ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.