ADVERTISEMENT

ಸರ್ಕಾರಿ ಹುದ್ದೆಯಿಂದ 121 ಜಾತಿಗಳು ವಂಚಿತ: ಕೆ.ಎನ್.ಲಿಂಗಪ್ಪ

‘ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ರಾಜಕಾರಣ’ ಕುರಿತು ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 9:20 IST
Last Updated 8 ಜುಲೈ 2021, 9:20 IST
ಮೈಸೂರಿನ ವಿಜ್ಞಾನ ಭವನದಲ್ಲಿ ಗುರುವಾರ ಡಾ.ಬಿ.ಆರ್.ಅಂಚೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಡಿ.ದೇವರಾಜ ಅರಸು ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ.ಎನ್.ಲಿಂಗಪ್ಪ, ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ, ನಿರ್ದೇಶಕ ಪ್ರೊ. ಜೆ.ಸೋಮಶೇಖರ್  ಇದ್ದಾರೆ
ಮೈಸೂರಿನ ವಿಜ್ಞಾನ ಭವನದಲ್ಲಿ ಗುರುವಾರ ಡಾ.ಬಿ.ಆರ್.ಅಂಚೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಡಿ.ದೇವರಾಜ ಅರಸು ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ.ಎನ್.ಲಿಂಗಪ್ಪ, ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ, ನಿರ್ದೇಶಕ ಪ್ರೊ. ಜೆ.ಸೋಮಶೇಖರ್  ಇದ್ದಾರೆ   

ಮೈಸೂರು: ಇದುವರೆಗೂ 121 ಜಾತಿಗಳು ಒಂದೇ ಒಂದು ಸರ್ಕಾರಿ ಹುದ್ದೆ ಪಡೆಯಲು ಸಾಧ್ಯವಾಗಿಲ್ಲ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಡಿ.ದೇವರಾಜ ಅರಸು ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ.ಎನ್.ಲಿಂಗಪ್ಪ ಪ್ರಶ್ನಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಗುರುವಾರ ನಡೆದ ವೆಬಿನಾರ್‌ನಲ್ಲಿ ‘ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ರಾಜಕಾರಣ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈಗ ಶೇ 95ರಷ್ಟು ಸಮುದಾಯಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳೆಂದು ಗುರುತಿಸಲಾಗಿದೆ. ಕೆಲವೇ ಕೆಲವು ಬೆರಳೆಣಿಕೆಯಷ್ಟು ಸಮುದಾಯಗಳು ಮಾತ್ರವೇ ಮೀಸಲಾತಿಯಿಂದ ದೂರ ಉಳಿದಿವೆ. ಅರ್ಹತೆ ಇಲ್ಲದ ಸಮುದಾಯಗಳು ಮೀಸಲಾತಿಯ ಬಹುಪಾಲನ್ನು ಕಬಳಿಸುತ್ತಿವೆ ಎಂದು ಹೇಳಿದರು.‌

ADVERTISEMENT

ಚಿನ್ನಪ್ಪರೆಡ್ಡಿ ವರದಿಯನ್ನು ಯಥಾವತ್ತಾಗಿ ಜಾರಿ ಮಾಡದ ಸರ್ಕಾರ, ವರದಿಯಲ್ಲಿ ಶಿಫಾರಸ್ಸು ಮಾಡದ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ, 3ಎ, 3ಬಿ ವರ್ಗಗಳನ್ನು ಸೃಷ್ಟಿಸಿತು. ಇದರಿಂದ ಒಟ್ಟಾರೆ ಮೀಸಲಾತಿಯ ಪ್ರಮಾಣ ಶೇ 73ಕ್ಕೆ ಹೆಚ್ಚಿತು. ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದಾಗ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಲಯವು ಅಂತಿಮವಾಗಿ ಶೇ 50ಕ್ಕೆ ಮೀಸಲಾತಿ ಪ್ರಮಾಣ ಮಿತಿಗೊಳಿಸಿ ಎಂದು ತೀರ್ಪು ನೀಡಿದಾಗಲೂ ವರದಿಯಲ್ಲಿ ಶಿಫಾರಸ್ಸು ಮಾಡದ ಜಾತಿಗಳನ್ನು ಪಟ್ಟಿಯಿಂದ ಕೈಬಿಡದ ಸರ್ಕಾರ ಎಲ್ಲವನ್ನೂ ಸೇರಿಸಿ ಮೀಸಲಾತಿ ಪ್ರಮಾಣವನ್ನು ಕಡಿಮೆಗೊಳಿಸಿತು. ಇದು ವರದಿಯಲ್ಲಿ ಶಿಫಾರಸ್ಸು ಮಾಡಿದ ಜಾತಿಗಳಿಗೆ ಘೋರ ಅನ್ಯಾಯ ಮಾಡಿದಂತಾಯಿತು. ಅರ್ಹತೆ ಇಲ್ಲದ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದ ಕುರಿತು ಯಾರೂ ಪ್ರಶ್ನಿಸದೇ ಇರುವುದು ದೊಡ್ಡ ದುರಂತ ಎಂದು ವಿಶ್ಲೇಷಿಸಿದರು.

ಹಿಂದುಳಿದ ವರ್ಗಗಳ ಆಯೋಗಗಳು ಹಿಂದುಳಿದ ಜಾತಿಗಳನ್ನು ಸರಿಯಾಗಿ ಗುರುತಿಸಿ ವರದಿ ನೀಡಿದರೂ ಸರ್ಕಾರ ಆ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುತ್ತಿಲ್ಲ. ಈ ವರದಿಯನ್ನು ವಿರೂಪಗೊಳಿಸಿ ಜಾರಿಗೊಳಿಸುತ್ತಿರುವುದರಿಂದ ನಿಜವಾಗಿ ಹಿಂದುಳಿದಿರುವ ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.

ಎಲ್ಲ ಪ್ರವರ್ಗಗಳಲ್ಲೂ ಇದುವರೆಗೆ ಅವಕಾಶಗಳನ್ನು ಪಡೆಯದ ಜಾತಿಗಳನ್ನು ಗುರುತಿಸಿ ಅವುಗಳನ್ನೆಲ್ಲ ಸೇರಿಸಿ ಪ್ರತ್ಯೇಕ ಪ್ರವರ್ಗ ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.