ADVERTISEMENT

ಪ್ರತಿ ಗ್ರಾ.ಪಂ.ನಲ್ಲೂ 150 ಗಿಡ ನೆಡುವಿಕೆ ಇಂದಿನಿಂದ

ಮೈಸೂರು ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಿಭಾಗದಿಂದ ಗಿಡ ನೆಡುವ ಯೋಜನೆ

ಡಿ.ಬಿ, ನಾಗರಾಜ
Published 4 ಜೂನ್ 2019, 19:45 IST
Last Updated 4 ಜೂನ್ 2019, 19:45 IST
ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳು ತಮ್ಮ ನರ್ಸರಿಗಳಲ್ಲಿ ಬೆಳೆಸಿರುವ ಸಸ್ಯಗಳು
ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳು ತಮ್ಮ ನರ್ಸರಿಗಳಲ್ಲಿ ಬೆಳೆಸಿರುವ ಸಸ್ಯಗಳು   

ಮೈಸೂರು: ಅರಣ್ಯ ಪ್ರಮಾಣ ಹೆಚ್ಚಳಕ್ಕಾಗಿ, ಜಿಲ್ಲೆಯ 266 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆ (ಜೂನ್‌ 5) ಅಂಗವಾಗಿ ತಲಾ 150 ಗಿಡಗಳನ್ನು ನೆಡಲು, ಮೈಸೂರು ಸಾಮಾಜಿಕ ಅರಣ್ಯ ವಿಭಾಗ ಯೋಜನೆಯೊಂದನ್ನು ರೂಪಿಸಿಕೊಂಡಿದೆ.

ಪ್ರಸ್ತುತ ಜಿಲ್ಲೆಯಲ್ಲಿ 18ರಿಂದ 19% ಅರಣ್ಯವಿದೆ. ನಿಸರ್ಗದ ಸಮತೋಲನಕ್ಕಾಗಿ 33% ಅರಣ್ಯವಿರುವುದು ಕಡ್ಡಾಯ. ಜಿಲ್ಲೆಯ ವ್ಯಾಪ್ತಿಯಲ್ಲಿ 33% ಅರಣ್ಯ ಬೆಳೆಸಲು, ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಜಿಲ್ಲೆಯ ಏಳು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಏಕ ಕಾಲಕ್ಕೆ ಯೋಜನೆಗೆ ಹಸಿರು ನಿಶಾನೆ ಸಿಗಲಿದೆ. ರಮ್ಜಾನ್‌ ನಿಮಿತ್ತ ಬುಧವಾರ ಸರ್ಕಾರಿ ರಜೆಯಿದ್ದರೂ; ಆಯ್ದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಯೋಜನೆಗೆ ಚಾಲನೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯೂ ಸಾಥ್‌ ನೀಡಿದ್ದು, ಮೊದಲ ದಿನವೇ 3670 ಸಸಿಗಳನ್ನು ನೆಡಲು ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಮುನ್ನುಡಿ ಇಂದು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತಲಾ 150 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಮುನ್ನುಡಿ ಬರೆಯಲಾಗುವುದು. ಆಯಾ ವಲಯದ ವಲಯ ಅರಣ್ಯಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾಮ ಪಂಚಾಯ್ತಿ ಪಿಡಿಒಗಳು, ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಯೋಜನೆಗೆ ಶ್ರೀಕಾರ ಬೀಳಲಿದೆ.

ಸತತ ಹತ್ತು ದಿನ ಜೂನ್ 15ರವರೆಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯಡಿ ಸಸಿ ನೆಡಲಾಗುವುದು. ಇವುಗಳ ಆರೈಕೆ, ಪಾಲನೆಯನ್ನು ಆಯಾ ಗ್ರಾಮ ಪಂಚಾಯಿತಿಯ ಪಿಡಿಒಗಳೇ ನಿರ್ವಹಿಸಬೇಕು. ಗ್ರಾಮಸ್ಥರಿಗೂ ಈ ನಿಟ್ಟಿನಲ್ಲಿ ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದೇವೆ. ಜಿಲ್ಲಾ ಪಂಚಾಯಿತಿಯ ಸಿಇಒ ಸಹ ಪಿಡಿಒಗಳಿಗೆ ಈಗಾಗಲೇ ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶಾಲಾ–ಕಾಲೇಜು ಮೈದಾನ, ಸರ್ಕಾರಿ ಶಾಲೆಗಳ ಆವರಣ, ದೇಗುಲದ ಪ್ರಾಂಗಣ, ಗುಂಡು ತೋಪು, ಕೆರೆ ಅಂಗಳ, ಸರ್ಕಾರಿ ಭೂಮಿ, ಗೋಮಾಳ, ಸಮುದಾಯದ ಭೂಮಿ, ರಸ್ತೆ ಬದಿ, ಉದ್ಯಾನಗಳು, ಬಡಾವಣೆಗಳು, ಸ್ಮಶಾನಗಳಲ್ಲೂ ಗಿಡ ನೆಡುವಿಕೆಗೆ ಆಯಾ ವಲಯ ಅರಣ್ಯಾಧಿಕಾರಿಗಳು ಕ್ರಿಯಾ ಯೋಜನೆಯನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ ಎಂದು ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪಿ.ಮಹದೇವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.