ADVERTISEMENT

1,500 ಕೆ.ಜಿ ಹೂ, 400 ಕೆ.ಜಿ ದ್ರಾಕ್ಷಿ ಅಲಂಕಾರ!

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 4:40 IST
Last Updated 23 ಜೂನ್ 2012, 4:40 IST
1,500 ಕೆ.ಜಿ ಹೂ,  400 ಕೆ.ಜಿ ದ್ರಾಕ್ಷಿ ಅಲಂಕಾರ!
1,500 ಕೆ.ಜಿ ಹೂ, 400 ಕೆ.ಜಿ ದ್ರಾಕ್ಷಿ ಅಲಂಕಾರ!   

ಮೈಸೂರು: 1,500 ಕೆ.ಜಿ ಹೂ, 400 ಕೆ.ಜಿ. ದ್ರಾಕ್ಷಿ, 600 ಕಟ್ಟು ಸೊಪ್ಪು, 40 ಜನ ಕೆಲಸಗಾರರು.. ಮೂರು ದಿನ ನಿರಂತರ ಕೆಲಸ! ಇವು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಅಲಂಕಾರದ ವಿಶೇಷಗಳು.

ಆಷಾಢ ಶುಕ್ರವಾರದ ಅಂಗವಾಗಿ ನಾಲ್ಕು ವಾರಗಳ ಕಾಲ ನಡೆಯಲಿರುವ ಚಾಮುಂಡೇಶ್ವರಿ ವಿಶೇಷ ಪೂಜೆ ಹಾಗೂ ವರ್ಧಂತ್ಯುತ್ಸವಕ್ಕಾಗಿ ಈ ವಿಶೇಷ ಅಲಂಕಾರ ಮಾಡಲಾಗಿದೆ. ಇದರಿಂದಾಗಿ ದೇವಸ್ಥಾನದ ಮೆರುಗು ಇಮ್ಮಡಿಗೊಂಡಿದೆ.

ಬೆಂಗಳೂರಿನ ಸಗಟು ಹೂ ವ್ಯಾಪಾರಿ ವೆಂಕಟೇಶ್ ಹಾಗೂ ಮೈಸೂರಿನ ಉದ್ಯಮಿ ರಾಜು ದೇವಿಯ ಸೇವಾರ್ಥವಾಗಿ 1.40 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾಮುಂಡಿ ದೇವಸ್ಥಾನದ ಅಲಂಕಾರ ಮಾಡಿದ್ದಾರೆ. ಬಗೆ ಬಗೆಯ ಹೂಗಳ ಜೊತೆಗೆ 400 ಕೆ.ಜಿ ದ್ರಾಕ್ಷಿ ಬಳಸಿರುವುದು ಈ ಬಾರಿಯ ವಿಶೇಷ.

12 ವರ್ಷಗಳಿಂದ ಮೊದಲ ಆಷಾಢ ಶುಕ್ರವಾರದಂದು ದೇವಸ್ಥಾನದ ಅಲಂಕಾರ ಮಾಡುತ್ತಿರುವ ವೆಂಕಟೇಶ್ 40 ಜನ ಕೆಲಸಗಾರರನ್ನು ಬಳಸಿ ಮೂರು ದಿನ ಹಗಲು ರಾತ್ರಿ ಕೆಲಸ ಮಾಡಿದ್ದಾರೆ.

ಇದಕ್ಕಾಗಿ 100 ಕೆ.ಜಿ ಆಸ್ಟ್ರೇಲಿಯಾ ನೀಲಿ, 100 ಕೆ.ಜಿ ಆಸ್ಟ್ರೇಲಿಯಾ ಕೆಂಪು ಹೂ, 600 ಕಟ್ಟು ಸೊಪ್ಪು, 500 ಕೆ.ಜಿ ಕೆಂಪು ಹಾಗೂ 500 ಕೆ.ಜಿ ಹಳದಿ ಚೆಂಡು ಹೂ ಸೇರಿದಂತೆ 1,500  ಕೆ.ಜಿ ಹೂ ಬಳಸಿದ್ದಾರೆ.

`ದೇವಿಯ ಆಶೀರ್ವಾದ ಪಡೆಯಲು ಈ ಸೇವೆ ಮಾಡಿದ್ದೇನೆ. ಎರಡನೇ ವಾರವೂ ಅಲಂಕಾರ ಮಾಡಿಕೊಡುವಂತೆ ಕೇಳಿಕೊಂಡರು. ಆದರೆ, 1.35 ರಿಂದ 1.40 ಲಕ್ಷ ವೆಚ್ಚ ತಗುಲುವುದರಿಂದ ಸ್ವಲ್ಪ ಕಷ್ಟ.

ಹೀಗಾಗಿ ಪ್ರತಿ ವರ್ಷ ಮೊದಲ ಶುಕ್ರವಾರದಂದು ಮಾತ್ರ ಸೇವಾ ಕೈಂಕರ್ಯ ಮಾಡುತ್ತಿದ್ದೇನೆ. ದೇವಿಯ ಆಶೀರ್ವಾದ, ಕೃಪೆ ಇದ್ದರೆ ಮುಂದಿನ ದಿನಗಳಲ್ಲಿ ಎರಡನೇ ವಾರವೂ ಅಲಂಕಾರ ಮಾಡುತ್ತೇನೆ~ ಎಂದು ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಉಚಿತ ಬಸ್ ಸೇವೆ!
ಲಲಿತಮಹಲ್ ಹೆಲಿಪ್ಯಾಡ್‌ನಿಂದ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ನಸುಕಿನ 2.30 ಗಂಟೆಯಿಂದಲೇ ಉಚಿತ ಬಸ್ ಸೇವೆ ಕಲ್ಪಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಉಚಿತ ಬಸ್ ಸೇವೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, `ಭಕ್ತಾದಿಗಳಿಗೆ ಉಚಿತ ಬಸ್ ಸೇವೆ ಕಲ್ಪಿಸಲು `ಆಸರೆ~ ಫೌಂಡೇಷನ್ ವತಿಯಿಂದ ಸಾರಿಗೆ ಇಲಾಖೆಗೆ 11 ಲಕ್ಷ ರೂಪಾಯಿ ಪಾವತಿಸಲಾಗುತ್ತಿದೆ. ಈ ಪೈಕಿ ಮೊದಲ ಶುಕ್ರವಾರ 30 ಬಸ್ಸುಗಳು ಸಂಚರಿಸುತ್ತಿದ್ದು, 2.52 ಲಕ್ಷ ರೂಪಾಯಿ ಪಾವತಿಸಲಾಗಿದೆ~ ಎಂದು ಹೇಳಿದರು.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೆಎಸ್‌ಆರ್‌ಟಿಸಿ ಸಹಾಯಕ ಸಂಚಾರ ವ್ಯವಸ್ಥಾಪಕ ಸುಧೀರ್, `ನಸುಕಿನ 2.30 ಗಂಟೆಗೆ ಬಸ್ ಸೇವೆ ಆರಂಭಗೊಂಡಿತು. ದೇವಸ್ಥಾನಕ್ಕೆ ತೆರಳು ಭಕ್ತಾದಿಗ ಗಾಗಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ಹಾಗೂ ಪೊಲೀಸ್ ಸಹಾಯವಾಣಿ ತೆರೆಯಲಾಗಿದೆ.

ನಗರ ಬಸ್ ನಿಲ್ದಾಣದಿಂದ ಎಂಟು ವೋಲ್ವೊ, ಎಂಟು ಸಾಮಾನ್ಯ ಹಾಗೂ 20 ವಿಶೇಷ ಬಸ್ಸುಗಳನ್ನು ಒದಗಿಸ ಲಾಗಿದೆ. ಕಳೆದ ವರ್ಷ ಮೂರನೇ ಶುಕ್ರವಾರ 35 ಬಸ್ಸುಗಳನ್ನು ಬಳಸಲಾಗಿದ್ದು, 541 ಟ್ರಿಪ್ ಸಂಚರಿ ಸಿದ್ದವು. ಈ ವರ್ಷ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT