ADVERTISEMENT

ಮೈಸೂರು: ಪೊಲೀಸರ ಮನೆಯಲ್ಲೇ ಸಿನಿಮೀಯ ರೀತಿಯಲ್ಲಿ 2 ಕೆ.ಜಿ ಚಿನ್ನ ಕದ್ದ ಕಳ್ಳರು

ಕಿಂಚಿತ್ತೂ ಸುಳಿವು ಬಿಡದೇ ಪರಾರಿಯಾದ ಕಳ್ಳರು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 7:03 IST
Last Updated 2 ಸೆಪ್ಟೆಂಬರ್ 2020, 7:03 IST

ಮೈಸೂರು: ನಗರ ಅಪರಾಧ ದಾಖಲಾತಿ ಘಟಕದ (ಸಿಸಿಆರ್‌ಬಿ) ಹೆಡ್‌ಕಾನ್‌ಸ್ಟೆಬಲ್ ವನಜಾಕ್ಷಿ ಅವರ ನಿವಾಸದಲ್ಲಿ ಸೋಮವಾರ ರಾತ್ರಿ 2 ಕೆ.ಜಿ ಚಿನ್ನವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ವನಜಾಕ್ಷಿ ಅವರು ತಮ್ಮ ಪತಿ ಉದ್ಯಮಿ ವಿಜಯಕುಮಾರ್ ಅವರೊಂದಿಗೆ ತಮ್ಮ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ರಾತ್ರಿ 10 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ 15 ವರ್ಷದ ಪುತ್ರಿ ಒಬ್ಬರೇ ಮಲಗಿದ್ದರು. ರಾತ್ರಿ 3 ಗಂಟೆಗೆ ವಾಪಸ್ ಬಂದು ನೋಡುವಾಗ ತಮ್ಮ ರೂಮಿನಲ್ಲಿದ್ದ ಡ್ರಾಯರ್ ಮತ್ತು ಲಾಕರ್‌ಗಳಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ನಂತರ, ಪರಿಶೀಲನೆ ನಡೆಸಿದಾಗ ಬಾಲ್ಕನಿಯ ಬಾಗಿಲನ್ನು ಹೊರಗಿಂದ ಚಿಲಕ ಹಾಕಿರುವುದು ಗೊತ್ತಾಗಿದೆ.

ಆದರೆ, ಕಳ್ಳರು ಮನೆಯನ್ನು ಪ್ರವೇಶಿಸಿದ್ದು ಹೇಗೆ, ಒಳಗಿನಿಂದ ಚಿಲಕ ಹಾಕಿದ್ದ ಬಾಗಿಲನ್ನು ತೆರೆದಿದ್ದು ಹೇಗೆ ಎಂಬೆಲ್ಲ ಪ್ರಶ್ನೆಗಳೂ ನಿಗೂಢವಾಗಿಯೇ ಉಳಿದಿವೆ.

ADVERTISEMENT

ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವು ಬಂದು ಪರಿಶೀಲನೆ ನಡೆಸಿದರೂ, ಯಾವುದೇ ಸುಳಿವು ದೊರೆಯಲಿಲ್ಲ. ರಾತ್ರಿ ಸುರಿಯುತ್ತಿದ್ದ ಭಾರಿ ಮಳೆಯ ವೇಳೆ ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಮನೆ ದುರಸ್ತಿ ಕಾರ್ಯ ನಡೆಯುತ್ತಿದ್ದುದ್ದರಿಂದ ಸಂಬಂಧಿಕರು ಅರ್ಧ ಕೆ.ಜಿ ಚಿನ್ನಾಭರಣವನ್ನು ಇಟ್ಟಿರುವಂತೆ ನೀಡಿದ್ದು, ಅದೂ ಕಳವಾಗಿರುವ ಆಭರಣಗಳಲ್ಲಿ ಸೇರಿದೆ. ಇತ್ತೀಚೆಗಷ್ಟೇ ವಿಜಯಕುಮಾರ್ ಅವರು ಬ್ಯಾಂಕಿನ ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನವನ್ನು ಮನೆಗೆ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್‌ಗೌಡ, ಗೀತಾ, ಕೆ.ಆರ್.ವಿಭಾಗದ ಎಸಿಪಿ ಪೂರ್ಣಚಂದ್ರ, ಸರಸ್ವತಿಪುರಂ ಠಾಣೆ ಇನ್‌ಸ್ಪೆಕ್ಟರ್ ವಿಜಯ್ ಕುಮಾರ್, ಸಬ್‌ಇನ್‌ಸ್ಪೆಕ್ಟರ್ ಭವ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.