ADVERTISEMENT

ಹೊಸ ವರ್ಷ: ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 15:47 IST
Last Updated 26 ಡಿಸೆಂಬರ್ 2025, 15:47 IST
<div class="paragraphs"><p>ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ</p></div>

ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ

   

ಮೈಸೂರು: ‘ಇಲ್ಲಿನ ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ 2 ಲಕ್ಷ ಲಡ್ಡುಗಳನ್ನು ವಿತರಿಸಲಾಗುವುದು. ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ತಿಳಿಸಿದರು.

‘ಜ.1ರಂದು ಅಂದು ಬೆಳಿಗ್ಗೆ 4ರಿಂದ ರಾತ್ರಿ 11ರವರೆಗೆ ಭಕ್ತರಿಗೆ ಲಡ್ಡುಗಳನ್ನು ವಿತರಿಸಲಾಗುವುದು. ಅದಕ್ಕಾಗಿ ತಿರುಪತಿ ಮಾದರಿಯಲ್ಲಿ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಅಂದು ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಮಧುರೈನ ಶ್ರೀರಂಗಂಕ್ಷೇತ್ರದಿಂದ ತರಿಸಿರುವ ವಿಶೇಷ ‘ತೋಮಾಲೆ’ ಮತ್ತು ‘ಸ್ವರ್ಣಪುಷ್ಪ’ದಿಂದ ಸ್ವಾಮಿಗೆ ಸಹಸ್ರನಾಮಾರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ರಂಗನಾಥ ಸ್ವಾಮಿಗೆ ‘ಏಕಾದಶ ಪ್ರಾಕಾರೋತ್ಸವ’ ನೆರವೇರಲಿದೆ. 50 ಕ್ವಿಂಟಲ್‌ ಪುಳಿಯೊಗರೆ ನಿವೇದನೆಯೂ ನಡೆಯಲಿದೆ’ ಎಂದು ವಿವರಿಸಿದರು.

‘ಪ್ರಾರಂಭದಲ್ಲಿ ಅಂದರೆ 1994ರಲ್ಲಿ ಸಾವಿರ ಲಡ್ಡುಗಳ ವಿತರಣೆಯಿಂದ ಪ್ರಾರಂಭಿಸಿ, ಕಳೆದ ಹಲವು ವರ್ಷಗಳಿಂದ ಹೊಸ ವರ್ಷದ ದಿನದಂದು ಸರಾಸರಿ 1ರಿಂದ 2 ಲಕ್ಷ ಲಡ್ಡುಗಳನ್ನು ಭಕ್ತರಿಗೆ ವಿತರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

100 ಮಂದಿಯಿಂದ ಕೆಲಸ

‘ಲಡ್ಡು ಪ್ರಸಾದ ತಯಾರಿಕೆಯಲ್ಲಿ 100 ಮಂದಿ ನುರಿತ ಬಾಣಸಿಗರು ತೊಡಗಿದ್ದಾರೆ. ಡಿ.20ರಿಂದ ಆರಂಭವಾಗಿದ್ದು, 31ರವರೆಗೂ ಸಿದ್ಧಪಡಿಸಲಾಗುವುದು. ಇದಕ್ಕಾಗಿ, 100 ಕ್ವಿಂಟಲ್‌ ಕಡಲೆ ಹಿಟ್ಟು, 200 ಕ್ವಿಂಟಲ್‌ ಸಕ್ಕರೆ, 10ಸಾವಿರ ಲೀಟರ್ ಖಾದ್ಯ ತೈಲ, 500 ಕೆ.ಜಿ. ಗೋಡಂಬಿ, 500 ಕೆ.ಜಿ. ಒಣದ್ರಾಕ್ಷಿ, 250 ಕೆ.ಜಿ. ಬಾದಾಮಿ, 1 ಸಾವಿರ ಕೆ.ಜಿ. ಡೈಮಂಡ್‌ ಸಕ್ಕರೆ, 2ಸಾವಿರ ಕೆ.ಜಿ. ಬೂರಾ ಸಕ್ಕರೆ, 500 ಕೆ.ಜಿ. ಪಿಸ್ತಾ, 50 ಕೆ.ಜಿ. ಏಲಕ್ಕಿ, 50 ಕೆ.ಜಿ. ಜಾಕಾಯಿ ಮತ್ತು ಜಾಪತ್ರೆ, 50 ಕೆ.ಜಿ. ಪಚ್ಚಕರ್ಪೂರ ಹಾಗೂ 200 ಕೆ.ಜಿ. ಲವಂಗ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಈ ವರ್ಷ ಅಂದಾಜು 2ಸಾವಿರ ಗ್ರಾಂ. ತೂಕದ 10ಸಾವಿರ ಲಡ್ಡುಗಳು ಹಾಗೂ 150 ಗ್ರಾಂ. ತೂಕದ ಒಟ್ಟು 2 ಲಕ್ಷ ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಜಾತಿ, ಮತ ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು’ ಎಂದು ತಿಳಿಸಿದರು.

ಚಲನಚಿತ್ರ ನಟ ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮೀ, ಅಳಿಯ ಗೋವಿಂದರಾಜು, ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಪಾಲ್ಗೊಂಡಿದ್ದರು.

ಏಕೆ ವಿತರಣೆ?

‘ಲೋಕ ಕಲ್ಯಾಣಾರ್ಥವಾಗಿ, ಸರ್ವರಿಗೂ ಸುಖ, ಶಾಂತಿ ನೆಮ್ಮದಿ ದೊರೆಯಲೆಂದು ಪ್ರಾರ್ಥಿಸಿ ಈ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾತೀಯತೆ, ಮತೀಯತೆ ತೊಲಗಿಸಿ ಸಮಾನತೆ, ಸರ್ವಧರ್ಮ ಸಮನ್ವಯತೆ ಆಶಯದಲ್ಲಿ ಹೊಸ ವರ್ಷಾಚರಣೆ ಮಾಡಲಾಗುತ್ತಿದೆ. ವರ್ಷವನ್ನು ಒಳ್ಳೆಯ ಕಾರ್ಯದ ಮೂಲಕ ಆರಂಭಿಸಬೇಕೆಂಬ ಕಾರಣದಿಂದ ವಿಶೇಷ ಸಂಕಲ್ಪ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಗುತ್ತಿದೆ’ ಎಂದು ಭಾಷ್ಯಂ ಸ್ವಾಮೀಜಿ ಹೇಳಿದರು.

‘ರಾಜ್‌ಕುಮಾರ್‌ ಅವರ ಕುಟುಂಬದವರ ಪ್ರತಿ ಮನೆಗೂ ಪ್ರತಿ ವರ್ಷವೂ ದೇವಸ್ಥಾನದಿಂದ ಲಡ್ಡುಪ್ರಸಾದ ತಲುಪಿಸಲಾಗುತ್ತಿದೆ’ ಎಂದು ತಿಳಿಸಿದರು.

ರಾಜ್‌ಕುಮಾರ್‌ ದಂಪತಿ ಪ್ರೇರಣೆ: ‘ವರನಟ ರಾಜಕುಮಾರ್ ದಂಪತಿ ಪ್ರೇರಣೆಯಿಂದ 1994ರಲ್ಲಿ ಲಡ್ಡು ವಿತರಣೆ ಆರಂಭಿಸಲಾಯಿತು. ಅದು ಈವರೆಗೂ ನಿರಾತಂಕವಾಗಿ ನಡೆಯುತ್ತಿದೆ. ಭಕ್ತರು ಜ.1ರಂದು ದೇವರ ದರ್ಶನ ಪಡೆದು ಲಡ್ಡು ಪ್ರಸಾದ ಸ್ವೀಕರಿಸಬೇಕು’ ಎಂದು ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.