ಮೈಸೂರು: ಮಹಾರಾಷ್ಟ್ರದ ವಿವೇಕ್ ಭಾಸ್ಕರ್ ವಾಟಪಾಡೆ ಅವರು ಇಲ್ಲಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ನಡೆದಿರುವ ಶ್ರವಣದೋಷವುಳ್ಳವರ 25ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಪ್ರಶಸ್ತಿಯತ್ತ ಹೆಜ್ಜೆ ಇಟ್ಟಿದ್ದು, ಅವರಿಗೆ ದೇವೇಂದ್ರ ಶ್ರೀಹರಿ ವೈದ್ಯ ಹಾಗೂ ಸೌರಭ್ ಹನ್ಸ್ ಪೈಪೋಟಿ ಒಡ್ಡಿದ್ದಾರೆ.
ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಮಂಗಳವಾರ ಆರು ಸುತ್ತುಗಳ ಅಂತ್ಯಕ್ಕೆ ಈ ಮೂವರೂ ತಲಾ 5.5 ಅಂಕಗಳೊಂದಿಗೆ ಮುನ್ನಡೆ ಗಳಿಸಿದ್ದಾರೆ. ಇನ್ನೂ ಮೂರು ಸುತ್ತಿನ ಆಟ ಬಾಕಿ ಇದೆ.
ಆರನೇ ಸುತ್ತಿನ ಹಣಾಹಣಿಯಲ್ಲಿ ವಿವೇಕ್ ಹಾಗೂ ಹರಿಯಾಣದ ಸೌರಭ್ ಪಂದ್ಯ ಡ್ರಾ ಮಾಡಿಕೊಂಡು ತಲಾ ಅರ್ಧ ಅಂಕ ಹಂಚಿಕೊಂಡರು. ಬಿಳಿಯ ಕಾಯಿಗಳೊಂದಿಗೆ ಕಣಕ್ಕೆ ಇಳಿದ ಮಹಾರಾಷ್ಟ್ರದ ದೇವೇಂದ್ರ, ಪಂಜಾಬ್‌ನ ಆಟಗಾರ್ತಿ ಮಲ್ಲಿಕಾ ಹಂಡರನ್ನು ಮಣಿಸಿ ಅಂಕ ಹೆಚ್ಚಿಸಿಕೊಂಡರು. ಮತ್ತೊಂದು ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿ ಕೆ. ಯಶಸ್ವಿ ಗುಜರಾತಿನ ಕಡಚ್ಚ ರಂಭಾಯ್ ನೆಬಾಭಾಯ್ ಎದುರು ಡ್ರಾಗೆ ತೃಪ್ತಿಪಟ್ಟರು.
ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಐದನೇ ಸುತ್ತಿನ ಅಂತ್ಯಕ್ಕೆ ಪಶ್ಚಿಮ ಬಂಗಾಳದ ಅಂಕಿತ್ ಗಂಗೂಲಿ 5 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪುದುಚೇರಿಯ ಎ. ರೋಷನ್, ಕರ್ನಾಟಕದ ಸಂಜಯ್, ಎಸ್. ಶ್ರೇಯಾ, ಬಿಹಾರದ ಆರ್ಯನ್ ಸಿಂಗ್ ಹಾಗೂ ಗುಜರಾತಿನ ಅಶ್ರಫ್ ಜಾವೆದ್ ಮನ್ಸುರಿ ತಲಾ 4 ಅಂಕ ಗಳಿಸಿದ್ದು, ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಮುನ್ನಡೆದಿದ್ದಾರೆ. ಇನ್ನೂ ಎರಡು ಸುತ್ತಿನ ಆಟ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.