ADVERTISEMENT

ಮೈಸೂರಿನಲ್ಲಿ ಮತ್ತೆ 35 ಮಂದಿಗೆ ಕೋವಿಡ್

ಏರುತ್ತಲೇ ಇರುವ ಕೊರೊನಾ ಸೋಂಕಿತರ ಸಂಖ್ಯೆ; ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 4:39 IST
Last Updated 4 ಜುಲೈ 2020, 4:39 IST
ಕೊರೊನಾ ನಿಯಂತ್ರಣಕ್ಕಾಗಿ ಶುಕ್ರವಾರ ಸಂಜೆ 6 ಗಂಟೆಗೆ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿದ ವರ್ತಕರು ಮನೆಗಳತ್ತ ತೆರಳುವಾಗ ಕೆ.ಆರ್.ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು
ಕೊರೊನಾ ನಿಯಂತ್ರಣಕ್ಕಾಗಿ ಶುಕ್ರವಾರ ಸಂಜೆ 6 ಗಂಟೆಗೆ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿದ ವರ್ತಕರು ಮನೆಗಳತ್ತ ತೆರಳುವಾಗ ಕೆ.ಆರ್.ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು   

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ಮೂವರು ಬಾಲಕರು ಮತ್ತು ಮೂವರು ಬಾಲಕಿಯರೂ ಸೇರಿದಂತೆ 35 ಮಂದಿಗೆ ಹೊಸದಾಗಿ ‘ಕೋವಿಡ್ –19’ ಪತ್ತೆಯಾಗಿದೆ. 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 3 ದಿನಗಳಲ್ಲಿ ಸೋಂಕಿತರ ಸಂಖ್ಯೆ 103 ತಲುಪಿರುವುದು ಆತಂಕ ತರಿಸಿದೆ. ಮೂವರು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.

ಹೊಸದಾಗಿ ಕೋವಿಡ್‌ ದೃಢಪಟ್ಟವರಲ್ಲಿ ಒಬ್ಬರು ಗರ್ಭಿಣಿ ಸೇರಿದಂತೆ 10 ಮಹಿಳೆಯರು, ಮೂವರು ಬಾಲಕಿಯರು, ಮೂವರು ಬಾಲಕರು ಸೇರಿದ್ದಾರೆ. ಮಕ್ಕಳಲ್ಲಿ 6, 17, 7 ವರ್ಷದ ಬಾಲಕಿ, 13 ವರ್ಷದ ಇಬ್ಬರು ಮತ್ತು 14 ವರ್ಷದ ಬಾಲಕ ಇದ್ದಾರೆ.

57, 21, 20, 43, 31, 44, 45, 21, 48, 66, 36, 27,45, 41, 21, 55, 69, 33, 82, 34 ವರ್ಷ ವಯಸ್ಸಿನ ಪುರುಷರು, 36, 47, 26, 33, 70, 52, 25, 25, 41, 56 ವರ್ಷ ವಯಸ್ಸಿನ ಮಹಿಳೆಯರು ಹೊಸದಾಗಿ ಸೋಂಕಿತರಾಗಿದ್ದಾರೆ.

ADVERTISEMENT

ಇವರಲ್ಲಿ ಇನ್‌ಫ್ಲೂಯೆಂಜಾ ತರಹದ ಶೀತ ಜ್ವರಬಾಧೆಯಿಂದ 14 ಮಂದಿ ಬಳಲುತ್ತಿದ್ದರೆ, ತೀವ್ರ ಉಸಿರಾಟದ ತೊಂದರೆಯಿಂದ 5 ಮಂದಿ ಆಸ್ಪತ್ರೆ ಸೇರಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಸಂಜೆ 6ರ ನಂತರ ನಗರ ಸ್ತಬ್ದ:

ಏರುತ್ತಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಂಜೆ 6ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಹೇರಿದೆ. ಶುಕ್ರವಾರ ಸಂಜೆ 6 ಗಂಟೆಯಾಗುತ್ತಿದ್ದಂತೆ ಅಂಗಡಿಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ತಮ್ಮ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು. ಇದರಿಂದ ಕೆಲಕಾಲ ಹಲವು ಭಾಗಗಳಲ್ಲಿ ಸಂಚಾರದಟ್ಟಣೆ ಉಂಟಾಯಿತು.

ಸಂಜೆ 6.30ರ ನಂತರ ಇಡೀ ನಗರ ಸಂಪೂರ್ಣ ಸ್ತಬ್ದಗೊಂಡಿತು. ರಸ್ತೆಗಳು ಬಿಕೊ ಎನ್ನತೊಡಗಿದವು. ಸಂಜೆಯ ನಂತರ ಹೆಚ್ಚು ಮಂದಿ ಸರಕುಗಳನ್ನು ಖರೀದಿಸಲು, ರಸ್ತೆಬದಿ ಪಾನಿಪೂರಿ ಮೊದಲಾದ ತಿನಿಸುಗಳನ್ನು ಸೇವಿಸಲು ಹೊರ ಬರುತ್ತಾರೆ ಹಾಗೂ ಉದ್ಯಾನದಲ್ಲಿ ವಾಯುವಿಹಾರ ನಡೆಸುತ್ತಾರೆ. ಇದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತದೆ. ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.