ಮೈಸೂರು: ‘ಜಲಮೂಲಗಳ ರಕ್ಷಣೆ ಮಾಡಿ ಹನಿ ನೀರನ್ನೂ ಉಳಿಸದಿದ್ದರೆ, 3ನೇ ಜಾಗತಿಕ ಮಹಾಯುದ್ಧ ಸಂಭವಿಸಲಿದೆ’ ಎಂದು ಜೀಕೆ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಕೆ.ಬಾಲಕೃಷ್ಣನ್ ಎಚ್ಚರಿಕೆ ನೀಡಿದರು.
ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ‘ವಿಶ್ವ ಜಲ ದಿನ’ದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ನೀರಿನ ನೈರ್ಮಲ್ಯ’ ಕುರಿತು ಉಪನ್ಯಾಸ ನೀಡಿದ ಅವರು, ‘ನಗರೀಕರಣದ ವೇಗ ಹಾಗೂ ಜಲಮೂಲಗಳ ವಿಪರೀತ ನಾಶದಿಂದ ನೀರು ಕಲುಷಿತವಾಗುತ್ತಿದೆ’ ಎಂದರು.
‘ಶತಮಾನದ ಹಿಂದೆ ಕೆರೆಗಳಿಂದ ಕಂಗೊಳಿಸುತ್ತಿದ್ದ, ನೀರಿನ ಕೊರತೆಯೇ ಕಂಡಿರದ ಬೆಂಗಳೂರು ನಗರಕ್ಕೆ ಕಾವೇರಿ ನೀರು ಕೂಡ ಇದೀಗ ಸಾಲುತ್ತಿಲ್ಲ. ಒಂದು ಕಾಲದಲ್ಲಿ ನೀರಿನ ಸ್ವಾವಲಂಬನೆ ಸಾಧಿಸಿದ್ದ ನಗರಗಳು, ನದಿಮೂಲಗಳನ್ನು ನಂಬಿಕೊಳ್ಳಬೇಕಿದೆ. ಅಲ್ಲಿನ ಕೆರೆಗಳು ಅವಸಾನಗೊಂಡಿವೆ’ ಎಂದು ತಿಳಿಸಿದರು.
‘ಕೈಗಾರಿಕೆಗಳು, ನಗರಗಳ ಒಳಚರಂಡಿ ಅಸಮರ್ಪಕ ನಿರ್ವಹಣೆಯಿಂದ ಕೆರೆಗಳು, ಕುಂಟೆಗಳು ಹಾಗೂ ನದಿಗಳ ನೀರು ಅಶುದ್ಧವಾಗುತ್ತಿವೆ. ಅಂತರ್ಜಲದ ವಿಪರೀತ ಬಳಕೆಯಿಂದಲೂ ಫ್ಲೋರೈಡ್ ಹಾಗೂ ಲವಣಾಂಶಯುಕ್ತ ನೀರು ಸಿಗುತ್ತಿದೆ’ ಎಂದರು.
‘ನಗರದ ಪ್ರತಿ ಮನೆಗಳಲ್ಲೂ ಮಳೆ ನೀರು ಸಂಗ್ರಹ ಮಾಡಬೇಕು. ಗ್ರಾಮೀಣರು ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಚೆಕ್‌ಡ್ಯಾಂ ನಿರ್ಮಾಣ ಮಾಡಬೇಕು. ಕೈಗಾರಿಕೆಗಳು ನೀರಿನ ಮರುಬಳಕೆ ಮಾಡಬೇಕು. ಓಡುವ ಮಳೆ ನೀರನ್ನು ನಿಲ್ಲಿಸಬೇಕು. ಆಗ ಮಾತ್ರ ನೀರಿಗಾಗಿ ಯುದ್ಧಗಳಾಗುವುದನ್ನು ತಪ್ಪಿಸಬಹುದು’ ಎಂದು ಪ್ರತಿಪಾದಿಸಿದರು.
‘ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ 1 ಲಕ್ಷ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಲ್ಲಿ ರೋಟರಿ, ಲಯನ್ಸ್ ಸಂಸ್ಥೆಗಳು ನಿರ್ಮಿಸಲು ಯೋಜಿಸಿದ್ದವು. ಈಗಿನ ಸರ್ಕಾರಕ್ಕೂ ಪ್ರಸ್ತಾಪ ಮಾಡಲಾಗಿದ್ದು, ಚುನಾವಣೆ ನಂತರ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ಎ.ಮೋಹನ್ ಕೃಷ್ಣ, ಬಿ.ಎಸ್.ಪ್ರಭಾಕರ ಹಾಗೂ ಎನ್.ಎಸ್.ಮಹದೇವಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.