ಮೈಸೂರು: ‘ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿರುವ ಕಾರಣದಿಂದ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಹೊಸದಾಗಿ 44 ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ರಾಜ್ಯದ ವಿವಿಧೆಡೆ ಒಟ್ಟು 100 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ, ಮೇಲ್ದರ್ಜೆಗೆ ಏರಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ. ಜಮೀನು ಸಿಗುತ್ತಿದ್ದಂತೆಯೇ ಹಂತ ಹಂತವಾಗಿ ನಿರ್ಮಿಸಲಾಗುವುದು. ಭೂಮಿ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಹೇಳಿದರು.
ನಗರದಲ್ಲಿ ಯುಜಿ ಕೇಬಲ್: ‘ನಗರದಲ್ಲಿ ₹ 588 ಕೋಟಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಮಾಡಲಾಗುವುದು’ ಎಂದು ವಿವರ ನೀಡಿದರು.
‘ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಎಇ ಮೊದಲಾದ ಅಧಿಕಾರಿಗಳು ಆಗಾಗ ಕ್ಷೇತ್ರದ ಶಾಸಕರನ್ನು ಭೇಟಿಯಾಗಿ ಚರ್ಚಿಸಬೇಕು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ’ ಎಂದರು.
‘ರಾಜ್ಯದಲ್ಲಿರುವ ಎಲ್ಲಾ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸೆಪ್ಟೆಂಬರ್ ಒಳಗೆ ಸಕ್ರಮಗೊಳಿಸಲಾಗುವುದು. ಮೈಸೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 4.5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿದ್ದು, ಅದರಲ್ಲಿ ಈಗಾಗಲೇ 2.50 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ಉಳಿದವನ್ನೂ ಶೀಘ್ರದಲ್ಲೇ ಸಕ್ರಮಗೊಳಿಸಲಾಗುವುದು. 500 ಮೀಟರ್ ಒಳಗಡೆ ಲೈನ್ (ಮಾರ್ಗ) ಇದ್ದರೆ ನಾವೇ ಆದಷ್ಟು ಬೇಗ ಸಿದ್ಧಪಡಿಸಿಕೊಡುತ್ತೇವೆ. ಇಲ್ಲದಿದ್ದರೆ ರೈತರು ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ ಸಕ್ರಮ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಸ್ಥಳಕ್ಕೇ ಹೋಗಬೇಕಾಗುತ್ತದೆ:
‘ರಾಜ್ಯದಲ್ಲಿ 16 ಲಕ್ಷ ಕಿ.ಮೀ. ವಿದ್ಯುತ್ ಮಾರ್ಗ ಇದೆ. 12 ಲಕ್ಷ ಪರಿವರ್ತಕಗಳಿವೆ. ಬೇರೆಯದನ್ನು ಮನೆಯಲ್ಲೇ ಕುಳಿತು ನಿರ್ವಹಿಸಬಹುದು. ಆದರೆ, ವಿದ್ಯುತ್ ಮಾರ್ಗ, ಪರಿವರ್ತಕಗಳನ್ನು ಸ್ಥಳಕ್ಕೇ ಹೋಗಿ ದುರಸ್ತಿ ಮಾಡಬೇಕಾಗುತ್ತದೆ. ಹೀಗಾಗಿ, ಕೊಂಚ ವ್ಯತ್ಯಾಸಗಳಾಗುತ್ತವೆ. ಲೈನ್‌ಮನ್‌ಗಳ ನೇಮಕಾತಿಯೂ ನಡೆಯುತ್ತಿದೆ; ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ವಿದ್ಯುತ್ ಮಾರ್ಗ ಬದಲಿಸಲಾಗುವುದು. ಈ ಸಂಬಂಧ ಸೆಸ್ಕ್ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಗುರುವಾರ (ಜೂನ್ 5) ಸಭೆ ನಿಗದಿಯಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹೇಳಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಡಿ. ರವಿಶಂಕರ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಸಮಿತಿಯ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ಹಾಜರಿದ್ದರು.
‘18 ಹಾಡಿಗಳಿಗೆ ವಿದ್ಯುತ್’
‘ಜಿಲ್ಲೆಯ 18 ಹಾಡಿಗಳಿಗೆ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಅಲ್ಲಿನ 618 ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಮೂರು ತಿಂಗಳಲ್ಲಿ ಒದಗಿಸಲಾಗುವುದು’ ಎಂದು ಜಾರ್ಜ್ ಮಾಹಿತಿ ನೀಡಿದರು. ‘ರಾಜ್ಯದಲ್ಲಿ ‘ಕುಸುಮ್–ಸಿ’ ಯೋಜನೆಯಡಿ 2400 ಮೆಗಾವಾಟ್ ವಿದ್ಯುತ್ ಸೌರ ಶಕ್ತಿಯಿಂದ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಜೂನ್ 11ರಂದು ಗೌರಿಬಿದನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ 175 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬಳಸಿಕೊಳ್ಳಲಾಗುವುದು. ಸಮೀಪದ ಉಪಕೇಂದ್ರದ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ ವಿದ್ಯುತ್ ಪೂರೈಕೆ ಮಾಡಲಾಗುವುದು’ ಎಂದು ತಿಳಿಸಿದರು.
ರೈತರಿಗೆ ಅನುಮಾನ ಬೇಡ
‘200 ಯುನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಗೃಹಜ್ಯೋತಿ ಯೋಜನೆಯನ್ನು ಜಿಲ್ಲೆಯಲ್ಲಿ ಶೇ 99ರಷ್ಟು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಜಾರ್ಜ್ ತಿಳಿಸಿದರು. ‘ಪರಿವರ್ತಕಗಳ ಬ್ಯಾಂಕ್ ಮಾಡಲಾಗಿದೆ. ಒಂದು ಪರಿವರ್ತಕ ಹಿಂದೆ ₹ 25ಸಾವಿರಕ್ಕೆ ಸಿಗುತ್ತಿತ್ತು. ಈಗ ₹ 1.50 ಲಕ್ಷ ಕೊಟ್ಟು ಖರೀದಿಸಬೇಕಾಗಿದೆ. ಶೀಘ್ರ ಸಂಪರ್ಕ ಬೇಕಾದರೆ ಹಾಕಿಸಿಕೊಳ್ಳುವವರು ಹಣ ಕಟ್ಟಬೇಕಾಗುತ್ತದೆ. ಐಪಿ ಸೆಟ್‌ಗೆ ಆಧಾರ್ ಲಿಂಕ್ ಮಾಡಿದರೂ ಅರ್ಹರಿಗೆ ಉಚಿತವಾಗಿಯೇ ಕೊಡಲಾಗುತ್ತದೆ. ಎಲ್ಲೆಲ್ಲಿ ಉಚಿತವಾಗಿ ಕೊಡುತ್ತಿದ್ದೇವೆ ಎನ್ನುವುದು ಗೊತ್ತಾಗಬೇಕಲ್ಲವೇ? ಅದಕ್ಕಾಗಿ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ. ಆದರೆ ಉಚಿತವಾಗಿ ವಿದ್ಯುತ್ ಪೂರೈಸುವುದನ್ನು ನಿಲ್ಲಿಸಲಾಗುತ್ತದೆ ಎಂಬ ವದಂತಿ ಹಬ್ಬಿಸುವುದು ಸರಿಯಲ್ಲ. ರೈತರು ಯಾವುದೇ ಅನುಮಾನ ಹೊಂದುವುದು ಬೇಡ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.