ADVERTISEMENT

ಆರೋಪಿಗಳ ಸುಳಿವು ಕೊಟ್ಟವರಿಗೆ ₹ 5 ಲಕ್ಷ: ಪೊಲೀಸ್ ಇಲಾಖೆ

ಚಿನ್ನದಂಗಡಿ ದರೋಡೆ ಪ್ರಕರಣ l ಸ್ಥಳಕ್ಕೆ ಎಡಿಜಿಪಿ ಸಿ.ಎಚ್‌. ಪ್ರತಾಪರೆಡ್ಡಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 8:21 IST
Last Updated 25 ಆಗಸ್ಟ್ 2021, 8:21 IST
ದರೋಡೆ ನಡೆದ ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್‌ ಚಿನ್ನಾಭರಣ ಮಳಿಗೆಗೆ ಎಡಿಜಿಪಿ ಪ್ರತಾಪರೆಡ್ಡಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ದರೋಡೆ ನಡೆದ ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್‌ ಚಿನ್ನಾಭರಣ ಮಳಿಗೆಗೆ ಎಡಿಜಿಪಿ ಪ್ರತಾಪರೆಡ್ಡಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮೈಸೂರು: ಚಿನ್ನದಂಗಡಿ ದರೋಡೆ ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಮಂಗಳವಾರ ₹ 5 ಲಕ್ಷ ನಗದು ಬಹುಮಾನ ಘೋಷಿಸಿದೆ. ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುವುದು ಎಂಬ ಭರವಸೆ ನೀಡಿ, ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ.

‘ಪತ್ತೆಗೆ ಈಗಾಗಲೇ 25 ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. 80 ಮಂದಿ ಸಿಬ್ಬಂದಿ ಈ ತಂಡದಲ್ಲಿದ್ದು, ಪ್ರಕರಣದ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದರು.

ಎಡಿಜಿಪಿ ಸಿ.ಎಚ್‌.ಪ್ರತಾಪರೆಡ್ಡಿ ಅವರು ಮಂಗಳವಾರ ದರೋಡೆ ಮತ್ತು ಕೊಲೆ ನಡೆದ ವಿದ್ಯಾರಣ್ಯಾಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ದರೋಡೆಕೋರರು ಪರಾರಿ ಯಾದ ಗಲ್ಲಿ, ಸುತ್ತಮುತ್ತಲ ಪ್ರದೇಶಗಳು ಸೇರಿದಂತೆ ಸಮಗ್ರವಾಗಿ ಪರಿಶೀಲನೆ ನಡೆಸಿದ ಅವರು, ಪತ್ತೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಿದ ಪ್ರತಾಪರೆಡ್ಡಿ, ಈ ಹಿಂದೆ ನಡೆದಿರುವ ಅಪ
ರಾಧ ಕೃತ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಪತ್ತೆ ಕಾರ್ಯಾಚರಣೆಯ ಸ್ವರೂಪ ಮತ್ತು ಕಾರ್ಯತಂತ್ರಗಳನ್ನು ಕುರಿತು ಚರ್ಚೆ ನಡೆಸಿದರು.

ಮುಗಿಲು ಮುಟ್ಟಿದ ಆಕ್ರಂದನ: ದರೋಡೆಕೋರರ ಗುಂಡೇಟಿಗೆ ಬಲಿಯಾದ ಚಂದ್ರು ಅವರ ಮರಣೋತ್ತರ ಪರೀಕ್ಷೆ ಮಂಗಳವಾರ ನೆರವೇರಿತು. ಈ ವೇಳೆ ಅವರ ಸಂಬಂಧಿಕರ ರೋದನ ಮುಗಿಲು ಮುಟ್ಟಿತು.

‘ತಂಗಿಯ ಮದುವೆಯ ಜವಾಬ್ದಾರಿಯನ್ನು ನಿಭಾಯಿಸಿದ್ದ ಚಂದ್ರು ತನ್ನ ತಂದೆಗೆ ಆಸರೆಯಾಗಿದ್ದ. ದೇವಸ್ಥಾನಕ್ಕೆ ಹೋಗಬೇಕೇಂದು ಗಾರೆ ಕೆಲಸಕ್ಕೆ ಹೋಗದೇ ಕಿವಿಯೋಲೆ ಖರೀದಿಸಲು ಬಂದಿದ್ದೇ ಮುಳುವಾಯಿತು’ ಎಂದು ಸಂಬಂಧಿಯೊಬ್ಬರು ಕಣ್ಣೀರಾದರು.

‘ದರೋಡೆಕೋರರು ಸ್ಥಳೀಯರಲ್ಲ’: ‘ದರೋಡೆಕೋರರು ಬಳಸಿದ್ದ ಭಾಷೆ, ಹಾವಭಾವ ನೋಡಿದರೆ ಅವರು ಸ್ಥಳೀಯರಲ್ಲ ಎಂದು ಸ್ಪಷ್ಟವಾಗುತ್ತಿದೆ. ಹಿಂದಿ ಭಾಷೆಯನ್ನೇ ಹೆಚ್ಚಾಗಿ ಅವರು ಬಳಸಿದ್ದಾರೆ. ಬಹುಶಃ ಉತ್ತರ ಭಾರತದಿಂದ ಬಂದಿರುವ ತಂಡ ಇದ್ದಿರಬೇಕು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕಾಗಿ ಹೊರರಾಜ್ಯಗಳಿಗೆ ತನಿಖಾ ತಂಡವನ್ನು ಕಳುಹಿಸಲಾಗಿದೆ. ಸಿಸಿಟಿವಿಯಲ್ಲಿ ದೊರೆತ ಆರೋಪಿಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಒಂದೆರಡು ದಿನಗಳಲ್ಲಿ ಸುಳಿವು ದೊರೆಯುವ ನಿರೀಕ್ಷೆ ಇದೆ ಎಂದರು.

ನಗರದಲ್ಲಿರುವ ಲಾಡ್ಜ್‌ಗಳು ಹಾಗೂ ಹೋಟೆಲ್‌ಗಳ ತಪಾಸಣಾ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಯೋಜನಾಬದ್ಧ ಪಲಾಯನ!: ದರೋಡೆಕೋರರು ಯೋಜನಾಬದ್ಧವಾಗಿ ಪಲಾಯನ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಎಲ್ಲರ ಕಣ್ಣೆದುರು ಹೊರಟರೆ ಎಲ್ಲಿಯಾದರೂ ಸೆರೆ ಸಿಕ್ಕಬಹುದು ಎಂಬ ಲೆಕ್ಕಾಚಾರದಲ್ಲಿ ಸಮೀಪದ ರಸ್ತೆಯೊಂದರಲ್ಲಿ ಓಡಿದ್ದಾರೆ. ಇದಕ್ಕೂ ಮುನ್ನ ಗುಂಡು ಹಾರಿಸಿ ಸಾರ್ವಜನಿಕರು ಬೆನ್ನಟ್ಟದಂತೆ ನೋಡಿಕೊಂಡಿದ್ದಾರೆ. ಒಂದಷ್ಟು ದೂರ ಓಡಿ ಯಾವುದೋ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ವಾಹನ ಏರಿ ಪರಾರಿಯಾಗಿದ್ದಾರೆ. ಈ ರೀತಿ ಪರಾರಿಯಾಗುವುದಕ್ಕೆ ಇವರು ಸಾಕಷ್ಟು ಮುಂಚೆಯೇ ಯೋಜನೆ ಸಿದ್ಧಪಡಿಸಿಕೊಂಡಿರಬಹುದು ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.