ADVERTISEMENT

ಕಾವೇರಿ ಒಡಲಿನಲಿ ರಾಸುಗಳ ಕಳೇಬರ

ನದಿ ಸೇರುತ್ತಿವೆ ಕಾಲುಬಾಯಿ ಜ್ವರದಿಂದ ಮೃತಪಟ್ಟ ಜಾನುವಾರುಗಳು; ಸಾಂಕ್ರಾಮಿಕ ರೋಗಳ ಭೀತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 7:37 IST
Last Updated 4 ಜನವರಿ 2018, 7:37 IST
ಕಾವೇರಿ ಒಡಲಿನಲಿ ರಾಸುಗಳ ಕಳೇಬರ
ಕಾವೇರಿ ಒಡಲಿನಲಿ ರಾಸುಗಳ ಕಳೇಬರ   

ಕೆ.ಆರ್.ನಗರ: ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಕಾಲುಬಾಯಿ ಜ್ವರದಿಂದ ಮೃತಪಡುತ್ತಿರುವ ಜಾನುವಾರು ಕಳೇಬರ ಕಾವೇರಿ ನದಿಯಲ್ಲಿ ಎಸೆಯುತ್ತಿದ್ದ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಚಂದಗಾಲು ಬಳಿಯ ಕಾವೇರಿ ನದಿಯಲ್ಲಿ, ಕೆ.ಆರ್.ನಗರ ಹಾಗೂ ಹುಣಸೂರಿಗೆ ನೀರು ಒದಗಿಸುವ ಪಂಪ್‌ಹೌಸ್‌ನ ಅನತಿ ದೂರದಲ್ಲಿ ಕಳೆದ 15 ದಿನಗಳಲ್ಲಿ 4ಕ್ಕೂ ಹೆಚ್ಚು ಜಾನುವಾರುಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ತಿನ್ನಲು ನಾಯಿ, ಪಕ್ಷಿಗಳ ದಂಡೇ ಸೇರುತ್ತಿದೆ. ಇದರಿಂದ ನದಿ ದಂಡೆಯಲ್ಲಿನ ಹಸಿರು ಮೇವಿಗಾಗಿ, ನದಿಯಲ್ಲಿ ನೀರು ಕುಡಿಯಲು ಬರುವ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ.

ADVERTISEMENT

ಕಳೇಬರ ಕೊಳೆಯುತ್ತಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ದುರ್ವಾಸನೆ ಬೀರಿದೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ರೈತರು ಮೂಗು ಮುಚ್ಚಿಕೊಂಡು ಕೆಲಸ ಮಾಡುವಂತಾಗಿದೆ. ನೀರಿನ ಮೂಲಕ ಕೆ.ಆರ್.ನಗರ ಹಾಗೂ ಹುಣಸೂರು ತಾಲ್ಲೂಕಿಗೆ ಹರಡುವ ಸಂಭವ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳದಿದ್ದರೆ ನದಿಯಲ್ಲಿ ಜಾನುವಾರುಗಳ ಕಳೇಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಜಿಸಿದ್ದಾರೆ.

‘ಕಾಲುಬಾಯಿ ಜ್ವರ ತಡೆಯಲು 20 ವರ್ಷದ ಕಾರ್ಯಕ್ರಮ ಹಾಕಿಕೊಳ್ಳ ಲಾಗಿದೆ. ಈಗಾಗಲೇ 13 ವರ್ಷದಿಂದ ಲಸಿಕೆ ಹಾಕಲಾಗುತ್ತಿದೆ. ಮುಂದಿನ 7 ವರ್ಷದ ಒಳಗೆ ರೋಗವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ತಾಲ್ಲೂಕಿನಲ್ಲಿ ದನ, ಕುರಿ, ಮೇಕೆ, ಹಂದಿ ಸೇರಿ ಒಟ್ಟು 1,44,549 ರಾಸುಗಳಿವೆ. ಇವುಗಳಿಗೆ ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಲಾಗುತ್ತಿದೆ. ಶೇ 94ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ, ಕೆಲವು ರೈತರು ಲಸಿಕೆ ಹಾಕಿಸುವುದಿಲ್ಲ. ಇದರಿಂದ ಅಲ್ಲಲ್ಲಿ ಕಾಲುಬಾಯಿ ಜ್ವರ ರೋಗ ಕಾಣಿಸಿಕೊಳ್ಳುತ್ತಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಕೃಷ್ಣರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲುಬಾಯಿ ಜ್ವರದಿಂದ ಮೃತ ಪಡುವ ಜಾನುವಾರು ಹೂಳಬೇಕು. ನದಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯುವುದು ತಪ್ಪು. ಎಲ್ಲೆಂದರಲ್ಲಿ ಎಸೆದರೆ ಸುತ್ತಲಿನ 1 ಕಿ.ಮೀ ಪ್ರದೇಶದವರೆಗೆ ಇರುವ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹರಡುವ ಸಾಧ್ಯತೆ ಇದೆ. ಮನುಷ್ಯರಿಗೂ ಕೆಲವು ರೋಗ ಬರಬಹುದು’ ಎಂದು ಎಚ್ಚರಿಕೆ ನೀಡಿದರು.

‘ಜಾನುವಾರುಗಳಿಗೆ ವಿಮೆಯೂ ಮಾಡಿಸಬಹುದು. ಇದರಿಂದ ಒಂದು ದನಕ್ಕೆ ₹ 50 ಸಾವಿರದವರೆಗೂ ವಿಮೆ ಪಡೆಯಬಹುದು. ವಿಮೆ ಮಾಡಿಸದ ಜಾನುವಾರು ಮೃತಪಟ್ಟರೂ ಮರಣೋತ್ತರ ಧನ ಸಹಾಯ ಎಂದು ಅರ್ಜಿ ಸಲ್ಲಿಸಿ ₹ 10 ಸಾವಿರ ಪಡೆಯಬಹು ದಾಗಿದೆ. ಆದರೆ, ಜಾನುವಾರು ಮೃತಪಟ್ಟ ತಕ್ಷಣ ಪಶು ವೈದ್ಯರ ಗಮನಕ್ಕೆ ತರಬೇಕು’ ಎಂದು ಅವರು ಮನವಿ ಮಾಡಿದರು.

ಪ್ರೀತಿಯಿಂದ ಜಾನುವಾರು ಸಾಕಿರುತ್ತೇವೆ. ಹೊಲ– ಗದ್ದೆಗಳಲ್ಲಿ ಕೆಲಸ ಮಾಡಿಸಿಕೊಂಡಿರುತ್ತೇವೆ. ಅವು ಗಳ ಹಾಲು ಕುಡಿದಿರುತ್ತೇವೆ. ಹೀಗೆ ಪ್ರೀತಿಯಿಂದ ಸಾಕಿದ ಜಾನುವಾರು ಮೃತ ಪಟ್ಟಾಗ ಅಂತ್ಯಸಂಸ್ಕಾರ ಮಾಡಿದರೆ ಅದಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಎಲ್ಲೆಂದರಲ್ಲಿ ಎಸೆದು, ನಾಯಿ ನರಿ ತಿನ್ನುವಂತೆ ಮಾಡಿದರೆ ಮಾನವೀಯತೆ ಮರೆತಂತೆ. ಅಲ್ಲದೆ ಸಾಂಕ್ರಾಮಿಕ ರೋಗಗಳನ್ನೂ ಆಹ್ವಾನಿಸಿದಂತೆ ಎಂದು ಚಂದಗಾಲು ಗ್ರಾಮಸ್ಥ ರೂಪೇಶ್ ಹೇಳಿದರು.

*

ಕಾವೇರಿ ನದಿಗೆ ಜಾನುವಾರು ಕಳೇಬರ ಎಸೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪಿಡಿಒ ಅವರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ.

-ಲಕ್ಷ್ಮಿ ಮೋಹನ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ

*

-ಪಂಡಿತ್ ನಾಟಿಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.